ವಿಜೃಂಭಣೆಯ ಬನಶಂಕರಿ ಅಮ್ಮನ ಜಾತ್ರೋತ್ಸವ

26Kush02
Published on

ಕುಶಾಲನಗರ: ಕುಶಾಲನಗರ ಸಮೀಪದ ಹೆಬ್ಬಾಲೆ ಗ್ರಾಮದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಗ್ರಾಮ ದೇವತೆ ಶ್ರೀ ಬನಶಂಕರಿ ಅಮ್ಮನವರ ಜಾತ್ರೋತ್ಸವ ಶುಕ್ರವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು.
ಬನಶಂಕರಿ ಅಮ್ಮ, ಬಸವೇಶ್ವರ, ರಾಮಲಿಂಗೇಶ್ವರ ದೇವ ಸ್ಥಾನ ಸಮಿತಿ ಹಾಗೂ ಗ್ರಾಮಸ್ಥರ ವತಿಯಿಂದ ಶುಕ್ರವಾರ ರಾತ್ರಿ ಶಕ್ತಿ ಸ್ವರೂಪಿಣಿ ಬನಶಂಕರಿ ದೇವಿಗೆ ವಿಶೇಷ ಪೂಜೆ ನೆರವೇರಿಸ ಲಾಯಿತು.

ಅಮ್ಮನವರ ಸನ್ನಿಧಿಯಲ್ಲಿ ಬೆಳಗ್ಗೆ 7 ಗಂಟೆಗೆ ಗಣಪತಿ ಪೂಜೆ, ಪುಣ್ಯಾಹಃ, ರಕ್ಷಾಬಂಧನ, ಧ್ವಜಾರೋಹಣ, ನವಗ್ರಹ ಸ್ಥಾಪನೆ, ನವಗ್ರಹ ಪೂಜೆ ದೇವಾಲಯದ ಪ್ರಧಾನ ಅರ್ಚಕ ಕೃಷ್ಣಮೂರ್ತಿ ನೇತೃತ್ವದಲ್ಲಿ ನಡೆದವು.
ಗ್ರಾಮದಲ್ಲಿ ದೇವಿಯ ವಾರ್ಷಿಕ ಹಬ್ಬದ ಅಂಗವಾಗಿ ಪವಿತ್ರ ಬನದಲ್ಲಿರುವ ಬನಶಂಕರಿ ದೇವಸ್ಥಾನದಲ್ಲಿ ಬೆಳಗ್ಗೆ ಕಳಶ ಸ್ಥಾಪಿಸುವುದರೊಂದಿಗೆ ವಿವಿಧ ಕಾರ್ಯಗಳು ದೇವಸ್ಥಾನ ಸಮಿತಿ ಅಧ್ಯಕ್ಷ ಎಚ್.ಎನ್.ಬಸವರಾಜು, ಎಚ್.ಪಿ.ರಾಜಪ್ಪ, ಸಮಿತಿ ಪದಾಧಿಕಾರಿಗಳು, ಸದಸ್ಯರ ನೇತೃತ್ವದಲ್ಲಿ ನೆರವೇರಿದವು.


ಸಂಜೆ 4 ಗಂಟೆಗೆ ಕ್ಷೀರಾಭಿಷೇಕ, ಗಣಪತಿ ಪೂಜೆ ನಂತರ ದೇವಿಯನ್ನು ಅಲಂಕರಿಸಲಾಯಿತು. ರಾತ್ರಿ 8 ಗಂಟೆಗೆ ಬನದಲ್ಲಿ ಅಗ್ನಿಕುಂಡ ಸ್ಥಾಪಿಸಲಾಯಿತು. ಹರಕೆ ಹೊತ್ತವರು ಅಗ್ನಿಕುಂಡ ತುಳಿದು ದೇವಿ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಹಬ್ಬದ ಅಂಗವಾಗಿ ಗ್ರಾಮವನ್ನು ತಳಿರು-ತೋರಣಗಳಿಂದ ಹಾಗೂ ದೇವಸ್ಥಾನಗಳನ್ನು ವಿದ್ಯುತ್ ದೀಪಗಳಿಂದ ಸಿಂಗರಿಸ ಲಾಗಿತ್ತು. ರಾತ್ರಿ 10.30 ಗಂಟೆ ಬಸವೇಶ್ವರ ದೇವಾಲಯದ ಬಳಿಯಿಂದ ವಿದ್ಯುತ್ ಅಲಂಕೃತ ಮಂಟಪದಲ್ಲಿ ಬನಶಂಕರಿ ದೇವಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ನಂತರ ಉತ್ಸವವನ್ನು ಮೆರವಣಿಗೆ ಮೂಲಕ ಪವಿತ್ರ ಬನಕ್ಕೆ ಕೊಂಡೊಯ್ಯಲಾಯಿತು. 9 ದಿನಗಳು ಉಪವಾಸ ವ್ರತ ಆಚರಿಸಿ ಶುಕ್ರವಾರ ಉತ್ಸವ ಗಳೊಂದಿಗೆ ಮೆರವಣಿಗೆಯಲ್ಲಿ ತಾಯಿಯ ಬನಕ್ಕೆ ಆಗಮಿಸಿದ ಭಕ್ತರು ಅಗ್ನಿಕುಂಡ ತುಳಿದು ದೇವಿಗೆ ಹಣ್ಣುತುಪ್ಪ ಅಭಿಷೇಕ ನೆರವೇರಿಸಿದರು.


ಮನಸೆಳೆದ ಶೋಭಾಯಾತ್ರೆ
ದೇವಿಯ ಉತ್ಸವದೊಂದಿಗೆ ಗ್ರಾಮದ ಇತರೆ ಭಾಗಗಳಿಂದ ಹೊರಟ ಉತ್ಸವ ಮಂಟಪಗಳ ಶೋಭಾ ಯಾತ್ರೆಯು ಹಬ್ಬಕ್ಕೆ ವಿಶೇಷ ಮೆರಗು ನೀಡಿದವು. ಮಡಿಕೇರಿ ದಸರಾ ಮಾದರಿಯಲ್ಲಿಯೇ ನಡೆಯುವ ಉತ್ಸವಗಳ ಮೆರವಣಿಗೆ ಗ್ರಾಮದೇವತೆ ಹಬ್ಬಕ್ಕೆ ವಿಶೇಷ ಮೆರಗು ನೀಡಿತು. ಗ್ರಾಮದ ಬಸ್ ನಿಲ್ದಾಣದ ಬಳಿ ಸಿಡಿಸುವ ಬಣ್ಣ ಬಣ್ಣದ ಆಕರ್ಷಕ ಮದ್ದುಗುಂಡುಗಳ ಪ್ರದರ್ಶನ ಹಾಗೂ ಬಾಣ ಬಿರುಸುಗಳ ಚಿತ್ತಾರ ನೋಡುಗರ ಕಣ್ಮನ ಸೆಳೆಯಿತು.


ಅನ್ನದಾನ: ದೇವಸ್ಥಾನ ಸಮಿತಿಯಿಂದ ರಾತ್ರಿ ಅಮ್ಮ ನವರ ದೇವಸ್ಥಾನದಲ್ಲಿ ಭಕ್ತರಿಗೆ ಅನ್ನಸಂರ್ತಪಣೆ ಆಯೋಜಿಸಲಾಗಿತ್ತು. ಮಾದರಿ ಯುವಕ ಸಂಘದ ಆಶ್ರಯದಲ್ಲಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಎತ್ತಿನ ಗಾಡಿ ಓಟ ಹಾಗೂ ವಿವಿಧ ಗ್ರಾಮೀಣ ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net