ವಿಜೃಂಭಣೆಯ ಬಡಗೂಡಮ್ಮದೇವಿ ರಥೋತ್ಸವ

08 NMG 02 (2)
Published on

ನಾಗಮಂಗಲ: ಪಟ್ಟಣ ಸೇರಿದಂತೆ ನೆರೆಯ ಹತ್ತು ಗ್ರಾಮಗಳ ಅಧಿದೇವತೆ ಶ್ರೀ ಬಡಗೂಡಮ್ಮದೇವಿ ಕೊಂಡೋತ್ಸವ, ರಥೋತ್ಸವ ಹಾಗೂ ಜಾತ್ರಾ ಮಹೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ವಿಜೃಂಭಣೆಯಿಂದ ನೆರವೇರಿತು.


ಜಾತ್ರಾ ಮಹೋತ್ಸವದ ಅಂಗವಾಗಿ ಕಳೆದ ಒಂದು ವಾರದಿಂದ ವಿವಿಧ ಧಾರ್ಮಿಕ ಕಾರ್ಯಗಳು ಜರುಗಿದವು. ಹೂವಿನ ಚಪ್ಪರ ಹಾಗೂ ಪಟ್ಟಣದ ಒಳಸುತ್ತಿನ ಮೆರವಣಿಗೆ, ಹತ್ತು ಹಳ್ಳಿಗಳ ಗ್ರಾಮಸ್ಥರಿಂದ ರಂಗಕುಣಿತ, ಪೂಜಾ ಕಾರ್ಯಗಳು, ಅಲಂಕಾರಭೂಷಿತಳಾದ ಶ್ರೀ ಬಡಗೂಡಮ್ಮದೇವಿಗೆ ವಿಶೇಷ ಪೂಜಾ ಕಾರ್ಯಗಳು ನೆರವೇರಿದವು. ಹೋಮ-ಹವನಾದಿ ಕಾರ್ಯಕ್ರಮಗಳೊಂದಿಗೆ ಅಭಿಷೇಕ, ಮಹಾಮಂಗಳಾರತಿ ನಂತರ ಕೊಂಡೋತ್ಸವ ನಡೆಯಿತು.


ಶನಿವಾರ ಬೆಳಗಿನ ಜಾವ 5ಗಂಟೆಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ದೇವಿಯ ದೇವರಗುಡ್ಡಪ್ಪ ಪೂಜೆಯೊಂದಿಗೆ ಕೊಂಡಹಾಯ್ದರು. ಮಧ್ಯಾಹ್ನ ಪಟ್ಟಣದ ಪಡುವಲಪಟ್ಟಣ ರಸ್ತೆಯ ಬಡಗೂಡಮ್ಮದೇವಿಯ ನೂರಾರು ವಕ್ಕಲುಗಳು ತಂಬಿಟ್ಟು ಬಾಳೆಹಣ್ಣು ತುಂಬಿದ ಬುಟ್ಟಿ ಸಮೇತ, ಶ್ರೀದೇವಿಯ ಉತ್ಸವ ಮೂರ್ತಿಯನ್ನು ಸಾರೋಟಿನಲ್ಲಿರಿಸಿ, ಚಾಮರಾಜನಗರ-ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆರವಣಿಗೆ ಮೂಲಕ ಟಿ.ಬಿ. ಬಡಾವಣೆಯ ಮೂಲದೇವಸ್ಥಾನಕ್ಕೆ ಕರೆತರಲಾಯಿತು. ಶನಿವಾರ ಸಂಜೆ ಗೋಧೂಳಿ ಲಗ್ನದಲ್ಲಿ ನಡೆದ ರಥೋತ್ಸವದಲ್ಲಿ ಪಟ್ಟಣ ಸೇರಿದಂತೆ ಸುತ್ತ-ಮುತ್ತಲಿನ ಗ್ರಾಮಸ್ಥರು ಮತ್ತು ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಪಾಲ್ಗೊಂಡು, ರಥದ ಕಳಶಕ್ಕೆ ಬಾಳೆಹಣ್ಣು ಜವನ ಎಸೆದು ತಮ್ಮ ಭಕ್ತಿ ಸಮರ್ಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net