ವಿಜೃಂಭಣೆಯ ಚುಂಚನಕಟ್ಟೆ ಬ್ರಹ್ಮರಥೋತ್ಸವ

jatre
Published on

ಸಾಲಿಗ್ರಾಮ: ದಕ್ಷಿಣ ಭಾರತದಲ್ಲಿ ಸುಗ್ಗಿಯ ನಂತರ ನಡೆಯುವ ಇತಿಹಾಸ ಪ್ರಸಿದ್ಧ ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಯ ಶ್ರೀರಾಮ ದೇವರ ಬ್ರಹ್ಮರಥೋತ್ಸವ ಬುಧವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ಬೆಳಗ್ಗೆ 10.50ಕ್ಕೆ ಶ್ರೀರಾಮ ದೇವಾಲಯದಿಂದ ಉತ್ಸವ ಮೂರ್ತಿಗಳಿಗೆ ವಿಶೇಷ ಪೂಜೆ ನಡೆಸಿ, ನಂತರ ಅವುಗಳನ್ನು ಮೆರವಣಿಗೆಯಲ್ಲಿ ತಂದು ವೇದ ಘೋಷಗಳೊಂದಿಗೆ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.

ಆನಂತರ ಬೆಳಗ್ಗೆ 11.50 ರಿಂದ 12.50ರಲ್ಲಿ ಸಲ್ಲಿದ ಶುಭ-ಮೀನಾ ಲಗ್ನದಲ್ಲಿ ಆದಿ ಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮನಾಥ ಸ್ವಾಮೀಜಿ, ಗಾವಡಗೆರೆ ಮಠದ ಶ್ರೀ ನಟರಾಜ ಸ್ವಾಮೀಜಿ, ಕೆ.ಆರ್.ನಗರ ಕಾಗಿನೆಲೆ ಮಠದ ಶ್ರೀ ಶಿವಾನಂದಾಪುರಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ರಥಕ್ಕೆ ಡಿ.ರವಿಶಂಕರ್ ಅವರು ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ನಂತರ ನೆರೆದಿದ್ದ ಸಾವಿರಾರು ಮಂದಿ ಭಕ್ತರು ಶ್ರೀರಾಮನಿಗೆ ಜಯಕಾರ ಕೂಗಿ ರಥವನ್ನು ದೇವಾಲಯದ ಸುತ್ತ ಒಂದು ಸುತ್ತು ಎಳೆದರು. ರಥವನ್ನು ಎಳೆಯುವ ಸಂದರ್ಭದಲ್ಲಿ ಭಕ್ತರು ದೇವರಿಗೆ ಹಣ್ಣು, ದವನ ಎಸೆದು ತಮ್ಮ ಭಕ್ತಿ ಭಾವ ಸಮರ್ಪಿಪಿಸಿದರು. ರಥೋತ್ಸವದಲ್ಲಿ ನೂತನ ವಧು-ವರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಭಕ್ತರು ಸರತಿ ಸಾಲಿನಲ್ಲಿ ನಿಂತು ಸೀತಾ ಸಮೇತ ಶ್ರೀರಾಮ ಮತ್ತು ಲಕ್ಷ್ಮಣರ ದರ್ಶನ ಪಡೆದು ತಮ್ಮ ಇಷ್ಟಾರ್ಥವನ್ನು ಈಡೇರಿಸುವಂತೆ ಪ್ರಾರ್ಥಿಸಿದರು.

ಪಟ್ಟಣದ ಮುಖ್ಯ ವೃತ್ತದಿಂದ ಶ್ರೀರಾಮ ದೇವಾಲಯದವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಹಾಕಿರುವ ಸಿಹಿತಿಂಡಿ ಮತ್ತು ವಿವಿಧ ಆಟಿಕೆಯ ಅಂಗಡಿಗಳು ಗಮನ ಸೆಳೆದವು.

ಹಿರಿಯ ಕಾಂಗ್ರೆಸ್ ಮುಖಂಡ ದೊಡ್ಡಸ್ವಾಮೇಗೌಡ, ತಾ.ಪಂ.ಮಾಜಿ ಅಧ್ಯಕ್ಷ ಹಾಡ್ಯಮಹದೇವಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಕುಪ್ಪಳ್ಳಿ ಸೋಮು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಮ್ಮನಹಳ್ಳಿ ಉದಯಶಂಕರ್, ಎಂ.ಎಸ್.ಮಹದೇವ್, ತಹಸೀಲ್ದಾರ್ ನರಗುಂದ, ತಾ.ಪಂ. ಇಒ ಕುಲದೀಪ್, ಉಪ ತಹಸೀಲ್ದಾರ್ ಕೆ.ಜೆ.ಶರತ್, ದೇವಾಲಯದ ಇಒ ರಘು, ಪಾರುಪತ್ತೆದಾರ್ ಯತಿರಾಜ್, ಎಇಇ ಗಳಾದ ಅರ್ಕೇಶ್, ಸುಮಿತಾ ಇತರರಿದ್ದರು.

ಪ್ರಸಾದ ವಿತರಣೆ

ರಥೋತ್ಸವಕ್ಕೆ ಬಂದಿದ್ದವರಿಗೆ ಶಾಸಕ ಡಿ.ರವಿಶಂಕರ್ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಅನ್ನ ಪ್ರಸಾದ ಮತ್ತು ಲಾಡು ವಿತರಣೆ ವ್ಯವಸ್ಥೆ ಮಾಡಿದ್ದರು. ಭಕ್ತರಿಗೆ ಮಜ್ಜಿಗೆ, ಪಾನಕವನ್ನು ಮಧುಚಂದ್ರ, ಎಚ್.ಕೆ.ಶ್ರೀಧರ್ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net