ವಿಜೃಂಭಣೆಯ ಗೊರಹಳ್ಳಿ ಶ್ರೀದೊಡ್ಡಮ್ಮ ತಾಯಿ ರಥೋತ್ಸವ

27BTP01
ಬೆಟ್ಟದಪುರ ಸಮೀಪದ ಗೊರಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಭಕ್ತರು ಶ್ರೀ ದೊಡ್ಡಮ್ಮ ತಾಯಿ ರಥಕ್ಕೆ ಪೂಜೆ ಸಲ್ಲಿಸಿದರು.
Published on

ಬೆಟ್ಟದಪುರ: ಸಮೀಪದ ಗೊರಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಶ್ರೀ ದೊಡ್ಡಮ್ಮ ತಾಯಿ ರಥೋತ್ಸವ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಐದು ವರ್ಷಗಳ ಬಳಿಕ ಗ್ರಾಮದಲ್ಲಿ ಎಲ್ಲ ಕೋಮಿನವರು (ಸಮುದಾಯದ) ಒಟ್ಟಾಗಿ ಹಬ್ಬಕ್ಕೆ ಸಕಲ ಸಿದ್ಧತೆ ಮಾಡಿಕೊಂಡು ತಾಯಿ ಹಬ್ಬವನ್ನು ಆಚರಣೆ ಮಾಡಿದರು. ಶುಕ್ರವಾರ ಬೆಳಗ್ಗೆ ರಥದ ಮೇಲೆ ಕಳಸ ಪ್ರತಿಷ್ಠಾಪನೆ ಮಾಡಲಾಯಿತು. ಸಂಜೆ ಗುಡಿಯಲ್ಲಿನ ಶ್ರೀ ದೊಡ್ಡಮ್ಮ ತಾಯಿ ಉತ್ಸವ ಮೂರ್ತಿಯನ್ನು ವಿಶೇಷವಾಗಿ ಅಲಂಕಾರ ಮಾಡಿದ ಪಲ್ಲಕ್ಕಿ ಮೇಲೆ ಕೂರಿಸಿ ವಾದ್ಯದೊಂದಿಗೆ ತೇರಿನ ಸುತ್ತ ಮೂರು ಪ್ರದಕ್ಷಿಣೆ ಹಾಕಲಾಯಿತು. ಮಧ್ಯರಾತ್ರಿ 12ಗಂಟೆಗೆ ಶುಭಲಗ್ನದಲ್ಲಿ ತಾಯಿಯ ಮೂರ್ತಿಯನ್ನು ವಿಶೇಷವಾಗಿ ಅಲಂಕೃತಗೊಂಡ ರಥದ ಮೇಲೆ ಪ್ರತಿಷ್ಠಾಪನೆ ಮಾಡಿದರು. ಭಕ್ತಾದಿಗಳೆಲ್ಲಾ ಒಟ್ಟಾಗಿ ಸೇರಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಬಳಿಯಿಂದ ಹೊರವಲಯದಲ್ಲಿರುವ ಶ್ರೀ ದೊಡ್ಡಮ್ಮ ಶ್ರೀ ಚಿಕ್ಕಮ್ಮ ತಾಯಿ ದೇವಸ್ಥಾನದವರೆಗೆ ರಥವನ್ನು ಎಳೆದರು.

ರಥ ಸಾಗುವ ಮಾರ್ಗದುದ್ದಕ್ಕೂ ಪಟಾಕಿಗಳು ಸಿಡಿದವು. ದೇವಸ್ಥಾನದ ಬಳಿಗೆ ರಥವು ಆಗಮಿಸದ ಬಳಿಕ ಭಕ್ತಾದಿಗಳು ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಂಡರು. ದೇವಸ್ಥಾನದ ಬಳಿ ಹಾಕಿದ ಕೊಂಡವನ್ನು ಹಾಯುವ ಮತ್ತು ದೇವಿಗೆ ಎಡೆಇಡುವ ಮೂಲಕ ಹಬ್ಬ ಆಚರಿಸಿ ಸಂಭ್ರಮಿಸಿದರು.

ಗ್ರಾಮದ ಪ್ರಮುಖ ಬೀದಿಗಳು ಮತ್ತು ದೇವಸ್ಥಾನಗಳು ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದವು. ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net