ವಿಜೃಂಭಣೆಯ ಕೂತಿನಾಡು ಸುಗ್ಗಿ

10spt1
Published on

ಸೋಮವಾರಪೇಟೆ: ಶಾಂತಳ್ಳಿ ಹೋಬಳಿಯ ನಗರಳ್ಳಿ ಗ್ರಾಮದಲ್ಲಿ ಕೂತಿನಾಡು ಸುಗ್ಗಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ನೆರವೇರಿತು.


ಕೂತಿನಾಡಿಗೆ ಸೇರಿದ 18 ಗ್ರಾಮಗಳ ನಿವಾಸಿಗಳು ನಗರಳ್ಳಿ ಸುಗ್ಗಿಕಟ್ಟೆಯಲ್ಲಿ ಸೇರಿ ಗ್ರಾಮ ದೇವತೆ ಸಬ್ಬಮ್ಮ ದೇವಿಗೆ ಸಾಂಪ್ರದಾಯಿಕ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಸಬ್ಬಮ್ಮ ದೇವಿಗೆ 18 ಗ್ರಾಮಗಳಲ್ಲಿ 15ದಿನಗಳ ಕಾಲ ವಿಶೇಷ ಪೂಜೆಗಳನ್ನು ಸಲ್ಲಿಸಿದ ಗ್ರಾಮಸ್ಥರು ನಗರಳ್ಳಿ ಸುಗ್ಗಿಕಟ್ಟೆಯಲ್ಲಿ ಪ್ರದಕ್ಷಿಣೆ ಹಾಕಿ ಮಳೆ, ಬೆಳೆ ಸಮೃದ್ಧಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಸುಮಾರು 800 ವರ್ಷಗಳ ಇತಿಹಾಸವಿರುವ ಸುಗ್ಗಿ ಉತ್ಸವದಲ್ಲಿ ಮಹಿಳೆಯರು, ಮಕ್ಕಳು, ಹಿರಿಯರು ಪಾಲ್ಗೊಂಡಿದ್ದರು.
ಸುಗ್ಗಿ ದೇವರ ಬನದಲ್ಲಿ ಅಳವಡಿಸಲಾಗಿರುವ ಬೃಹತ್ ಕಲ್ಲಿನ ಕಂಬದಲ್ಲಿ 4 ಜನರು ದೇವರ ಒಡೆಕಾರರನ್ನು ಬೆತ್ತದ ಉಯ್ಯಲೆಯಲ್ಲಿ ತೂಗಲಾಯಿತು. ಬಿಲ್ಲ ರಂಗದಲ್ಲಿ ಪೂರ್ವಜರ ಜೀವನ ಪದ್ಧತಿ ಬಿಂಬಿಸುವ ನೃತ್ಯ ಪ್ರಾಕಾರ, ಕಡವೆ ಬೇಟೆಯಾಡುವ ಪ್ರಸಂಗ ಅಕರ್ಷಿಸಿತು. ಕೊನೆಯಲ್ಲಿ ಕಡವೆ ಕಾಡು ಸೇರುವ ಮೂಲಕ, ಬೇಟೆಗಾರರಿಂದ ಪಾರಾವಾಗುವ ದೃಶ್ಯ, ಹಿಂದಿನ ಕಾಲದ ಜನರ ಪ್ರಕೃತಿ ಪ್ರೇಮ, ಪರಿಸರ ರಕ್ಷಣೆಗೆ ಅವರ ಮಾಡಿಕೊಂಡಿದ್ದ ಕಟ್ಟುಪಾಡುಗಳನ್ನು ಸಾಂಪ್ರದಾಯಿಕ ಬಿಳಿ ಕುಪ್ಪಸ ದಟ್ಟಿಯನ್ನು ಧರಿಸಿದ್ದ ದೇವರ ಬಿಲ್ಲುಗಾರರು ಬಿಲ್ಲರಂಗದಲ್ಲಿ ಪ್ರದರ್ಶನ ಹಾಕುತ್ತ ಭಕ್ತರಿಗೆ ಮಾಹಿತಿ ತಿಳಿಸಿದರು.


ಸುಗ್ಗಿ ಕುಣಿತ, ಸುಗ್ಗಿಹಾಡುವುದು, ಬಿಲ್ಲು ತೂಗುವುದು ಸೇರಿದಂತೆ ವಿವಿಧ ಜಾನಪದ ನೃತ್ಯಗಳು ನಡೆದವು. 18 ಗ್ರಾಮಗಳ ನವ ದಂಪತಿ ಮದುವೆ ಕಾಣಿಕೆ ಸಲ್ಲಿಸಿದರು. ಹರಕೆ ತೀರಿಸುವುದು, ಹರಕೆ ಮಾಡಿಕೊಳ್ಳುವ ಕಾರ್ಯಗಳು ನಡೆದವು. ಕೂತಿ ನಾಡು ವ್ಯಾಪ್ತಿಗೆ ಒಳಪಡುವ ಗ್ರಾಮಗಳಾದ ಕೂತಿ, ಯಡದಂಟೆ, ಕುಂದಳ್ಳಿ, ನಗರಳ್ಳಿ, ಹೆಮ್ಮನಗದ್ದೆ, ಕನ್ನಳ್ಳಿ, ಬೀಕಳ್ಳಿ, ಬೆಟ್ಟದಳ್ಳಿ, ಜಕ್ಕನಳ್ಳಿ, ಬೆಟ್ಟದಕೊಪ್ಪ, ಹಳ್ಳಿಯೂರು, ಕೊತ್ತನಳ್ಳಿ, ಇನಕನಹಳ್ಳಿ, ಬೆಂಕಳ್ಳಿ, ಕುಡಿಗಾಣ, ನಾಡ್ನಳ್ಳಿ, ತಡ್ಡಿಕೊಪ್ಪ, ಓಡಳ್ಳಿ ಗ್ರಾಮಗಳ ಮುಖ್ಯಸ್ಥರು ಗ್ರಾಮದೇವತೆಗೆ ಪಟ್ಟ ಒಪ್ಪಿಸಿ ಪೂಜೆ ಸಲ್ಲಿಸಿದರು.


ಸುಗ್ಗಿ ಕಟ್ಟೆಯ ಮುಖ್ಯ ರಂಗದಲ್ಲಿ ಈಡುಗಾಯಿ ಒಡೆಯಲಾಯಿತು. ಕೂತಿನಾಡು ಶ್ರೀ ಸಬ್ಬಮ್ಮ ದೇವರ ಸಮಿತಿ ಅಧ್ಯಕ್ಷ ಕೆ.ಬಿ.ಜಗದೀಶ್, ಉಪಾಧ್ಯಕ್ಷ ಸಿ.ಎಸ್.ಬೋಪಯ್ಯ,, ಕಾರ್ಯದರ್ಶಿ ಕೆ.ಯು.ಜಗದೀಶ್, ಖಜಾಂಚಿ ಎನ್.ಬಿ.ಸುರೇಶ್, ಪ್ರಮುಖರಾದ ಜಿ.ಆರ್.ಸುರೇಶ್, ಬಿ.ಆರ್.ಪ್ರವೀಣ್ ಸುಗ್ಗಿಯ ಉಸ್ತುವಾರಿ ವಹಿಸಿದ್ದರು. ಹಳ್ಳಿಯೂರು ಸತೀಶ್, ಜಕ್ಕನಳ್ಳಿ ಪ್ರಕಾಶ್, ನಗರಳ್ಳಿ ವಸಂತ್, ಎನ್.ಜಿ.ವೆಂಕಟೇಶ್, ಹೆಮ್ಮನಗದ್ದೆ ಶಶಿಕುಮಾರ್ ದೇವರ ಓಡೆಕಾರರಾಗಿ ಕಾರ್ಯನಿರ್ವಹಿಸಿದರು. ಕಳೆದ ಸಾಲಿನ ಅಧ್ಯಕ್ಷರಾದ ಜೋಯಪ್ಪ, ಪದಾಧಿಕಾರಿಗಳಾದ ಪ್ರಕಾಶ್, ಈರಪ್ಪ, ರಘು ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net