ವಿಜೃಂಭಣೆಯ ಕುಮಾರಲಿಂಗೇಶ್ವರಸ್ವಾಮಿ ಜಾತ್ರೋತ್ಸವ

17ss2swamijigalu meravanige
Published on

ಶನಿವಾರಸಂತೆ: ಸಮೀಪದ ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲುಕೋಡು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಕುಮಾರಲಿಂಗೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಮಂಗಳವಾರ ಅದ್ದೂರಿಯಾಗಿ ನೆರವೇರಿತು.

ಗ್ರಾಮದ ಕುಮಾರಲಿಂಗೇಶ್ವರಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆ 7 ಗಂಟೆಗೆ ದೇವರ ವಿಗ್ರಹವನ್ನು ವಾದ್ಯಗೋಷ್ಠಿಯೊಂದಿಗೆ ಗಂಗಾಸ್ನಾನಕ್ಕೆ ಕೊಂಡೊಯ್ಯಲಾಯಿತು. ತದನಂತರ ತಂದು ವಿಗ್ರಹವನ್ನು ದೇವಸ್ಥಾನದಲ್ಲಿಟ್ಟು ಅಲಂಕರಿಸಲಾಯಿತು. ವಿಶೇಷ, ಆರತಿ ಪೂಜೆ ಸೇರಿದಂತೆ ಇತರ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

ಮಧ್ಯಾಹ್ನ 12.50ಕ್ಕೆ ದೇವಸ್ಥಾನದಿಂದ ಕುಮಾರಲಿಂಗೇಶ್ವರ ದೇವರ ವಿಗ್ರಹವನ್ನು ಅಡ್ಡಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ವಾದ್ಯಗೋಷ್ಠಿಯೊಂದಿಗೆ ಗ್ರಾಮದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ನಂತರ ಜಾತ್ರಾ ಬನದಲ್ಲಿರುವ ದೇವಸ್ಥಾನದ ಸುತ್ತ ಅಡ್ಡಪಲ್ಲಕ್ಕಿ ಪ್ರದರ್ಶನ ನಡೆಸಿ ದೇವರ ವಿಗ್ರಹವನ್ನು ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಈ ವೇಳೆ ಭಕ್ತರು ಈಡುಗಾಯಿ ಒಡೆದು ದೇವರಿಗೆ ಹರಿಕೆ ಸಲ್ಲಿಸಿದರು.

ವಿವಿಧ ಮಠಾಧೀಶರು ಜಾತ್ರೋತ್ಸವದಲ್ಲಿ ಪಾಲ್ಗೊಂಡಿದ್ದರು. ಅಕ್ಕಪಕ್ಕದ ಗ್ರಾಮಗಳಿಂದ ನೂರಾರು ಭಕ್ತರು ಆಗಮಿಸಿದ್ದರು. ದೇವಸ್ಥಾನ ಸಮಿತಿ ಅಧ್ಯಕ್ಷ ಎಚ್.ಎಂ.ವಿವೇಕ್, ಪದಾಧಿಕಾರಿಗಳು, ಸಮಿತಿ ಸದಸ್ಯರು, ಗ್ರಾಮದ ಪ್ರಮುಖರ ನೇತೃತ್ವದಲ್ಲಿ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net