

ಕಿಕ್ಕೇರಿ: ಹೋಬಳಿಯ ಐಕನಹಳ್ಳಿ ಗ್ರಾಮದಲ್ಲಿ ಗ್ರಾಮದೇವತೆ ಐಕನಳಮ್ಮ, ವೀರಭದ್ರೇಶ್ವರ ಸ್ವಾಮಿಯ ಸಿಡಿ ಹಬ್ಬ, ಜಾತ್ರೆ ವಿಜೃಂಭಣೆಯಿಂದ ಶನಿವಾರ ಆರಂಭವಾಯಿತು.
ದೀಪಾವಳಿ ಹಬ್ಬದ ರಾತ್ರಿಯಂದು ಆರಂಭವಾಗಿ ಮೂರು ದಿನಗಳ ಕಾಲ ನಡೆಯುವ ಜಾತ್ರೆಗೆ ನೂರಾರು ಭಕ್ತರು ಆಗಮಿಸಿದ್ದರು. ಈ ಬಾರಿ ಬುಡಿಯಪ್ಪನ ವಠಾರದ ಭಕ್ತರು ಜಾತ್ರಾ ಮಹೋತ್ಸವದ ಉಸ್ತುವಾರಿ ವಹಿಸಿದ್ದರು.
ಜಾತ್ರೆಯ ಸಂಭ್ರಮಕ್ಕೆ ಗ್ರಾಮದ ಹೊರವಲಯದಲ್ಲಿರುವ ಜೋಡಿ ಕೆರೆಯ ತಟದಲ್ಲಿರುವ ದೇವಾಲಯದಲ್ಲಿ ಐಕನಹಳ್ಳಮ್ಮ ಅವರಿಗೆ ವಿಶೇಷ ಪೂಜಾ ಕೈಂಕರ್ಯ ನಡೆದವು. ಗ್ರಾಮದ ಎಲ್ಲೆಡೆ ವಿದ್ಯುತ್‌ದೀಪಾಲಂಕಾರ, ತಳಿರು-ತೋರಣ, ಆಕರ್ಷಕ ರಂಗವಲ್ಲಿ ಚಿತ್ತಾರಗಳಿಂದ ಕಂಗೊಳಿಸಿತು.
ಸಿಡಿಹಬ್ಬವನ್ನು ಗ್ರಾಮದ ತೋಪಣ್ಣ, ಕೆಂಗಪ್ಪ, ಹುಚ್ಚಮ್ಮ, ಬುಡಿಯಪ್ಪ ವಠಾರದವರು ಸಾಂಪ್ರದಾಯಿಕವಾಗಿ ನಡೆಸುತ್ತಾ ಬಂದಿದ್ದು, ಈ ಬಾರಿಯ ಹಬ್ಬದ ಉಸ್ತುವಾರಿಯನ್ನು ಬುಡಿಯಪ್ಪನ ವಠಾರದವರು ವಹಿಸಿಕೊಂಡಿದ್ದರು.
ತುಳಸಿ ಗ್ರಾಮದಿಂದ ವೀರಭದ್ರೇಶ್ವರ ಸ್ವಾಮಿಯ ಭಂಟರು, ವೀರ ಮಕ್ಕಳು ಆಗಮಿಸಿ ಕುಣಿದು ಭಕ್ತಿ ಮೆರೆದರು. ಗ್ರಾಮದಿಂದ ಸುಭದ್ರವಾಗಿ ಇಟ್ಟಿದ್ದ ಒಡವೆ, ವಸ್ತ್ರಗಳನ್ನು ಮೆರವಣಿಗೆ ಮೂಲಕ ಗ್ರಾಮ ಮುಖಂಡರು ಶ್ರದ್ಧಾಭಕ್ತಿಯಿಂದ ಮಂಗಳವಾದ್ಯದೊಂದಿಗೆ ತಂದು ದೇವಿಗೆ ತೊಡಿಸಿದರು. ಉಪವಾಸವ್ರತವಿದ್ದ ಭಕ್ತರು ಸರತಿಯಲ್ಲಿ ಸಾಗಿ ದೇವಿಯ ದರ್ಶನ ಪಡೆದರು. ಹಣ್ಣು ಕಾಯಿ ಅರ್ಪಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
ಗುಡಿಯ ಬಳಿ ನರ್ತಿಸುತ್ತಿದ್ದ ವೀರಮಕ್ಕಳು, ದೇವರ ಭಂಟರ ಬಳಿ ಬೆತ್ತದ ಕೋಲಿನಿಂದ ತಲೆಗೆ ಮುಟ್ಟಿಸಿಕೊಂಡು ನಮಿಸಿದರು. ಹರಕೆ ಹೊತ್ತು ಹಲವು ಭಕ್ತರು ಬಾಯಿಬೀಗ ಹಾಕಿಸಿಕೊಂಡು ದೇಗುಲ ಪ್ರದಕ್ಷಿಣೆ ಹಾಕಿ, ತೀರ್ಥ ಪ್ರೋಕ್ಷಣೆ ಮಾಡಿಸಿಕೊಂಡರು. ವೀರಮಕ್ಕಳು ಸಿಡಿ ಕಂಭಕ್ಕೆ ಏರಲು ಸಿಡಿ ಪ್ರಸಾದ ಹಾಕಿಸಿಕೊಂಡು ಸಿಡಿರಾಯನಿಗೆ ಜೈ, ಲಕ್ಷ್ಮೀದೇವಿಗೆ ಜೈಕಾರ ಹಾಕುತ್ತಾ ಸಿಡಿ ಕಟ್ಟಿಸಿಕೊಂಡು ಸಿಡಿ ರಥದಲ್ಲಿ ತಿರುಗಿದರು.
ಅರ್ಚಕರು ಭಕ್ತರು ಹಣ್ಣು, ಸೇವಿಗೆ, ಕಾಯಿ ಹಾಲು, ಮೊಳಕೆ ಕಟ್ಟಿದ ಹುರುಳಿಕಾಳು ಸಾಂಬಾರು ನೈವೇದ್ಯವಾಗಿ ದೇವಿಗೆ ಅರ್ಪಿಸಿದರು. ಸಾಮೂಹಿಕ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಕಾಯಿ, ಸಿಹಿ ಅಡುಗೆ ನೈವೈದ್ಯ, ತೀರ್ಥ ಪ್ರಸಾದ ವಿತರಿಸಿದರು. ದೂರದ ನೆಂಟರಿಷ್ಟರು ಗ್ರಾಮಕ್ಕೆ ಆಗಮಿಸಿ ಆತಿಥ್ಯ ಸ್ವೀಕರಿಸಿದರು.