

ಚಿತ್ರದುರ್ಗ:ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಲಗಿದ್ದಾಗ, ಮುಖ್ಯಮಂತ್ರಿ ರಾಜೀನಾಮೆ ಕೊಟ್ಟಿರುವಂತೆ ಕನಸು ಕಂಡಿರಬೇಕು. ಅದನ್ನೇ ಎಲ್ಲ ಕಡೆ ಹೇಳುತ್ತಿದ್ದಾರೆಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವ್ಯಂಗ್ಯವಾಡಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ 5 ವರ್ಷ ಮುಂದುವರಿಯುತ್ತಾರೆಂದು ಎಲ್ಲ ಸಚಿವರು, ಕಾಂಗ್ರೆಸ್ ಶಾಸಕರು ಹಾಗೂ ಪಕ್ಷ ಹೇಳಿದ್ದಾಗಿದೆ. ಈಗ ಸಿಎಂ ಕುರ್ಚಿ ಖಾಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ದಲಿತರು ಮುಂದೆ ಸಿಎಂ ಆಗಬಹುದು, ಅವರು ಕೂಡ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರಾಷ್ಟ್ರಪತಿ ಆಗಿದ್ದಾರೆ, ಪ್ರಧಾನಿಯೂ ಆಗಬಹುದು ಎಂದರು.
ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದ್ದು ಅಚ್ಚರಿಯ ಸಂಗತಿ. ಪ್ರಧಾನಿ ನರೇಂದ್ರ ಮೋದಿ ಹಾಗೂ, ಅಲ್ಲಿಯ 10 ವರ್ಷದ ಬಿಜೆಪಿ ಆಡಳಿತದೆಡೆ ಜನರಿಗೆ ಬೇಸರವಿತ್ತು. ಆದರೆ ಬಿಜೆಪಿಯ ಸುಳ್ಳು ಜನರಿಗೆ ಇಂಪಾಗಿ ಕೇಳಿಸಿದೆ ಎಂದು ಕಾಂಗ್ರೆಸ್ ಹಿನ್ನಡೆಗೆ ಪ್ರತಿಕ್ರಿಯಿಸಿದರು.
ಜಾತಿ ಗಣತಿ ವರದಿ ಎಂದಾದರೂ ಜಾರಿ ಆಗಲೇಬೇಕು. ಮುಡಾ ಪ್ರಕರಣ ಮರೆಮಾಚಲು ಈ ವಿಷಯ ಪ್ರಸ್ತಾಪಿಸಲಾಗಿಲ್ಲ. ಸಂಪುಟದಲ್ಲಿ ಚರ್ಚೆ ನಡೆಸಿದ ಬಳಿಕ ಸಾಧಕ-ಬಾಧಕ ಗೊತ್ತಾಗಲಿದೆ. ತಪ್ಪುಗಳಿದ್ದರೆ ಸರಿಪಡಿಸಲು ಅವಕಾಶವಿದೆ ಎಂದರು.
ಒಂದು ಸಾವಿರ ಕೋಟಿ ರೂ
ಶಕ್ತಿ ಯೋಜನೆಯಡಿ ರಾಜ್ಯಸರ್ಕಾರದಿಂದ ಸಾರಿಗೆ ನಿಗಮಗಳಿಗೆ ಒಂದು ಸಾವಿರ ಕೋಟಿ ರೂ.ಅಧಿಕ ಮೊತ್ತ ಬರಬೇಕಿದೆ. ವಾಹನ ಗಳ ಸ್ವಯಂಚಾಲಿತ ಪರೀಕ್ಷಾ ಕೇಂದ್ರಗಳನ್ನು ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಆರಂಭಿಸಲಾಗುವುದು. ಕೇಂದ್ರ ಸರ್ಕಾರ ಅಕ್ಟೋಬರ್ ಒಳಗಾಗಿ ಆರಂಭಿಸಬೇಕೆಂದು ನಿರ್ದೇಶಿಸಿತ್ತು. ಟೆಂಡರ್ ಕರೆಯಲಾಗಿದೆ. ವೆಹಿಕಲ್ ಟ್ರಾೃಕಿಂಗ್ ಸಿಸ್ಟಮ್ ಅನ್ನು ಸಾರಿಗೆ ನಿಗಮಗಳ ಬಸ್‌ಗಳಿಗೂ ಅಳವಡಿಸಲಾಗುವುದು. ಚಿತ್ರದುರ್ಗದಲ್ಲಿ ಕೆಎಸ್‌ಆರ್‌ಟಿಸಿ ನೂತನ ಬಸ್ ನಿಲ್ದಾಣ ಕಾಮಗಾರಿ ಶೀಘ್ರ ಆರಂಭಿಸಲಾಗುವುದು ಎಂದು ತಿಳಿಸಿದರು.
ಡಿಸಿಸಿ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಕರ್ನಾಟಕ ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಡಾ.ಯೋಗಿಶ್‌ಬಾಬು, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಶಿವಣ್ಣ, ಹಾಲಸ್ವಾಮಿ, ಎನ್.ಡಿ.ಕುಮಾರ್, ಕೆ.ಪಿ.ಸಂಪತ್‌ಕುಮಾರ್, ಡಿ.ಎನ್.ಮೈಲಾರಪ್ಪ ಇತರರು ಇದ್ದರು.