

ಕಲಬುರಗಿ: ಮೈಸೂರಿನ ಮುಡಾ ನಿವೇಶನ ಹಂಚಿಕೆಯ ಬಹುಕೋಟಿ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಬಂಧನ ಖಂಡಿಸಿ ನಗರದಲ್ಲಿ ಜಿಲ್ಲಾ ಬಿಜೆಪಿಯಿಂದ ದಿಢೀರ್ ಪ್ರತಿಭಟನೆ ನಡೆಸಲಾಯಿತು.
ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ಶುಕ್ರವಾರ ಮಧ್ಯಾಹ್ನ ದಿಢೀರ್ ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು, ಕಾರ್ಯಕರ್ತರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಹಿಂದುಳಿದ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅವ್ವಣ್ಣ ಮ್ಯಾಕೇರಿ ಮಾತನಾಡಿ, ರಾಜ್ಯ ಸರ್ಕಾರದ ಜನವಿರೋಧಿ, ಸಂವಿಧಾನ ವಿರೋಧಿ ನೀತಿ ಖಂಡಿಸಿದರು.
ಕಾಡಾ ಮಾಜಿ ಅಧ್ಯಕ್ಷ ಶರಣಪ್ಪ ತಳವಾರ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರವನ್ನು ದುರುಪಯೋಗ ಪಡೆಸಿಕೊಂಡು, ಪ್ರತಿ ಪಕ್ಷದ ಧ್ವನಿಯನ್ನು ಅಡಗಿಸುತ್ತಿದೆ. ಸಿದ್ದರಾಮಯ್ಯ ಪತ್ನಿ ಹೆಸರಿನಲ್ಲಿ ಅಕ್ರಮ ನಡೆಸಿದ್ದು, ಅದರ ವಿರುದ್ಧ ಹೋರಾಟ ನಡೆಸುತ್ತಿರುವ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಬಂಧನ ಖಂಡನೀಯ. ಸತ್ಯಾಸತ್ಯತೆ ಅರಿಯಲು ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.
ಮಾಧ್ಯಮ ಜಿಲ್ಲಾ ವಕ್ತಾರ ಸಂತೋಷ ಹಾದಿಮನಿ ಮಾತನಾಡಿ, ಕಾಂಗ್ರೆಸ್ ಪಕ್ಷ, ಸಿದ್ದರಾಮಯ್ಯ ಸದಾ ದಲಿತರ ಪರ ಎನ್ನುತ್ತಾರೆ. ಆದರೆ ಪದೇ ಪದೆ ದಲಿತರಿಗೆ ಮೀಸಲಿಟ್ಟ ಹಣವನ್ನು ಬೇರೆ ಯೋಜನೆಗೆ ವರ್ಗಾವಣೆ ಮಾಡುತ್ತಿದ್ದಾರೆ. ದಲಿತರ ವಾಲ್ಮೀಕಿ ನಿಗಮದ ೧೮೦ ಕೋಟಿ ರೂ. ಅಕ್ರಮ ನಡೆಸಿ, ದಲಿತರಿಗೆ ನಿರಂತರವಾಗಿ ಅನ್ಯಾಯ ಮಾಡುತ್ತಿದ್ದಾರೆ. ಮಾತೆತ್ತಿದ್ದರೆ ಸಂವಿಧಾನ ಎನ್ನುವ ರಾಹುಲ್ ಗಾಂಧಿ ಅವರ ಪಕ್ಷವೇ ದಲಿತ, ಸಂವಿಧಾನ ವಿರೋಧಿ ನಡೆ ಅನುಸರಿಸುತ್ತಿದೆ ಎಂದು ಕಿಡಿ ಕಾರಿದರು.
ಪ್ರಮುಖರಾದ ಶಿವಯೋಗಿ ನಾಗನಹಳ್ಳಿ, ಮಹಾದೇವ ಬೆಳಮಗಿ, ಉಮೇಶ ಪಾಟೀಲ್, ಧರ್ಮಣ್ಣ ಇಟಗಾ, ವಿಶಾಲ ದರ್ಗಿ, ನಾಗರಾಜ ಮಹಾಗಾಂವಕರ್, ಪ್ರವೀಣ ತೆಗನೂರ, ಬಸವರಾಜ ಪಾಟೀಲ್ ಬಿರಾಳ ಇತರರಿದ್ದರು.