

ಬಸವಕಲ್ಯಾಣ: ಹಿರಿಯ ಪತ್ರಕರ್ತ, ವಿಜಯವಾಣಿ ಕಲಬುರಗಿ ಆವೃತ್ತಿ ಸ್ಥಾನಿಕ ಸಂಪಾದಕ ಸದಾನಂದ ಜೋಶಿ ಅವರನ್ನು ಬೀದರ್ ಜಿಲ್ಲೆಯ ಪ್ರತಿಷ್ಠಿತ ದಿ.ಶಂಕರಪ್ರಸಾದ ದುಬೆ ವಿಭಾಗ ಮಟ್ಟದ ಉತ್ತಮ ಪತ್ರಕರ್ತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ೫ ಸಾವಿರ ರೂ.ನಗದು ಮತ್ತು ಫಲಕ ಒಳಗೊಂಡಿದೆ. ಭಾನುವಾರ ಬೆಳಗ್ಗೆ ೧೦ಕ್ಕೆ ಅನುಭವ ಮಂಟಪದಲ್ಲಿ ನಡೆಯಲಿರುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಜೋಶಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಾರ್ಥಂಡ ಜೋಶಿ, ಪ್ರಧಾನ ಕಾರ್ಯದರ್ಶಿ ಉದಯಕುಮಾರ ಮುಳೆ ತಿಳಿಸಿದ್ದರೆ. ಬೀದರ್ ಹತ್ತಿರದ ಜನವಾಡ ಗ್ರಾಮದ ಸದಾನಂದ ಜೋಶಿ ಅವರು ಪತ್ರಿಕಾ ರಂಗದ ಮೂಲಕ ೨೮ ವರ್ಷಗಳಿಂದ ಈ ಭಾಗದ ಅಭಿವೃದ್ಧಿಗೆ ಸಲ್ಲಿಸುತ್ತಿರುವ ಸೇವೆ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಜೋಶಿ ಅವರು ೧೯೯೪ರಲ್ಲಿ ಉತ್ತರ ಕರ್ನಾಟಕ ದಿನಪತ್ರಿಕೆಯಿಂದ ವೃತ್ತಿ ಜೀವನ ಆರಂಭಿಸಿದರು. ೧೯೯೯ರಲ್ಲಿ ವಿಜಯ ಕರ್ನಾಟಕ ಜಿಲ್ಲಾ ವರದಿಗಾರರಾದರು. ೨೦೧೨ರಲ್ಲಿ ವಿಜಯವಾಣಿ ಸೇರಿದರು. ಗಡಿ ಜಿಲ್ಲೆಯಲ್ಲಿ ಸುದೀರ್ಘ ಅವಧಿ ಸೇವೆ ಸಲ್ಲಿಸಿ ಎರಡು ವರ್ಷಗಳಿಂದ ವಿಜಯವಾಣಿ ಕಲಬುರಗಿ ಸ್ಥಾನಿಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.