ವಿಜಯಪುರದಲ್ಲಿ ಬೃಹತ್‌ಮಟ್ಟದಲ್ಲಿ ರಕ್ತದಾನ ಶಿಬಿರ

IMG-20220716-WA0035
ವಿಜಯಪುರ ನಗರದ ಆರ್.ಕೆ.ಎಂ. ಆಸ್ಪತ್ರೆಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಆರ್‌ಕೆಎಂ ಆಸ್ಪತ್ರೆ ಮುಖ್ಯಸ್ಥ ಡಾ.ಶಂಭುಲಿಂಗ ಕರ್ಪೂರಮಠ, ಮಹೇಂದ್ರ ನಾಯಕ ಫೌಂಡೇಶನ್ ಅಧ್ಯಕ್ಷ ದೇವಾನಂದ ಪೂಜಾರಿ, ಕಾರ್ಯದರ್ಶಿ ಚೇತನ ಮಠ, ಮಹೇಶ ಚವ್ಹಾಣ, ಸುನೀಲ ಚವ್ಹಾಣ ಇದ್ದರು.
Published on

ವಿಜಯಪುರ :ನಗರದ ಆರ್.ಕೆ.ಎಂ. ಆಸ್ಪತ್ರೆಯಲ್ಲಿ ಮಹಿಂದ್ರಕುಮಾರ ನಾಯಕ್ ಫೌಂಡೇಶನ್ ವತಿಯಿಂದ ಜು.20 ರಂದು ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಆರ್‌ಕೆಎಂ ಆಸ್ಪತ್ರೆ ಮುಖ್ಯಸ್ಥ ಡಾ.ಶಂಭುಲಿಂಗ ಕರ್ಪೂರಮಠ ತಿಳಿಸಿದರು.

ವಿಜಯಪುರದಲ್ಲಿ ಬೃಹತ್ ಪ್ರಮಾಣದ ರಕ್ತದಾನ ಶಿಬಿರ ಸಂಘಟನೆಗೆ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ರಾಷ್ಟ್ರೋತ್ಥಾನ ಬ್ಲಡ್ ಬ್ಯಾಂಕ್, ವಿಜಯಪುರ ಬ್ಲಡ್ ಬ್ಯಾಂಕ್, ಶಿವಗಿರಿ ಬ್ಯಾಂಕ್ ಹಾಗೂ ಸಿದ್ಧೇಶ್ವರ ಬ್ಲಡ್ ಬ್ಯಾಂಕ್ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, 800 ಕ್ಕೂ ಹೆಚ್ಚು ಯುವಕರು ರಕ್ತದಾನ ಶಿಬಿರದಲ್ಲಿ ಪಾಲ್ಗೊಳ್ಳಲು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಕ್ತದಾನ ಮಾಡುವುದರಿಂದ ಆಗುವ ಪ್ರಯೋಜನಗಳು ಸಾಕಷ್ಟಿವೆ. ಒಮ್ಮೆ ರಕ್ತದಾನ ಮಾಡುವುದರಿಂದ ಮೂರು ಜೀವಗಳಿಗೂ ಉಳಿಸುವ ಪುಣ್ಯ ಪ್ರಾಪ್ತಿಯಾಗಲಿದೆ. ಯುವಜನತೆ ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು.

ವಿಜಯಪುರ ಬ್ಲಡ್ ಬ್ಯಾಂಕ್ ಅಧ್ಯಕ್ಷ ಮಹೇಶ ಚವ್ಹಾಣ ಮಾತನಾಡಿ, ಪ್ರತಿದಿನ ನೂರು ಜನರು ರಕ್ತದಾನ ಮಾಡಿದರೆ ಮಾತ್ರ ವಿಜಯಪುರ ಜಿಲ್ಲೆಯ ಜನತೆಗೆ ಅನುಕೂಲವಾಗಲಿದೆ. ಕೊರತೆ ಎದುರಾದರೆ ನೆರೆಯ ರಾಜ್ಯಗಳಿಂದ ಪಡೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಉತ್ತಮ ಆರೋಗ್ಯ, ಜೀವ ಉಳಿಸುವ ಪುಣ್ಯಕ್ಕಾಗಿ ಯುವಜನತೆ ರಕ್ತದಾನಕ್ಕೆ ಮುಂದಾಗಬೇಕು ಎಂದು ತಿಳಿಸಿದರು.

ಮುಖಂಡ ಸುನೀಲ ಚವ್ಹಾಣ ಮಾತನಾಡಿ, ಜಿಲ್ಲೆಯಲಿ 8 ಬ್ಲಡ್ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿದ್ದು, ವಾರ್ಷಿಕ 30 ಸಾವಿರ ಯೂನಿಟ್ ರಕ್ತದ ಬೇಡಿಕೆ ಇದೆ. ಆದರೆ ಪ್ರಸ್ತುತ ಪೂರೈಕೆ ಆಗುತ್ತಿರುವ ಪ್ರಮಾಣ 18 ಸಾವಿರ ಯೂನಿಟ್ ಮಾತ್ರ ಲಭ್ಯವಾಗುತ್ತಿದೆ. ರಕ್ತ ಸಂಗ್ರಹಣೆಯಲ್ಲಿ ವೈಜ್ಞಾನಿಕ ವಿಧಾನ ಅನೇಕ ಕಡೆಗಳಲ್ಲಿ ಅನುಸರಿಸುತ್ತಿಲ್ಲ. ಈ ರೀತಿಯ ವಿಧಾನಗಳಿಗೆ ಕಡಿವಾಣ ಹಾಕಬೇಕು, ಸಾರ್ವಜನಿಕರ ಸುಲಿಗೆ ತಪ್ಪಿಸಬೇಕು ಎಂದರು.

ಮಹೇಂದ್ರ ನಾಯಕ ಫೌಂಡೇಶನ್ ಅಧ್ಯಕ್ಷ ದೇವಾನಂದ ಪೂಜಾರಿ, ಕಾರ್ಯದರ್ಶಿ ಚೇತನ ಮಠ, ವಿಕಾಸ ಮಲ್ಲಾಡಿ, ಅನೀಲ್ ಸಾಳುಂಕೆ, ಅಮೀತ್ ಯಳಮೇಲಿ ಇನ್ನಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net