ದೂರು ಪ್ರತಿದೂರು ದಾಖಲು

Crime Logo
Published on

ವಿಜಯಪುರ: ಜಿಲ್ಲೆಯ ತಾಳಿಕೋಟೆ ತಾಲೂಕಿನ ಮಿಣಜಗಿಯ ದಲಿತ ಯುವಕನನ್ನು ಸವರ್ಣೀಯರು ಮನಬಂದಂತೆ ಥಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿವೆ.

ವಾಹನ ಮುಟ್ಟಿದ್ದಕ್ಕೆ ಮಗ ಕಾಶೀನಾಥ ತಳವಾರನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಂದೆ ಯಂಕಪ್ಪ 13 ಜನರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಮಿಣಜಗಿ ಗ್ರಾಮದ ಕಿತ್ತೂರ ರಾಣಿ ಚನ್ನಮ್ಮ ವೃತ್ತದಲ್ಲಿ ಈ ಘಟನೆ ನಡೆದಿದ್ದು, ಚಪ್ಪಲಿಯಿಂದ ಹೊಡೆದು ಅವಮಾನಿಸಿದ್ದಾರೆ. ಅಲ್ಲದೆ, ಜಾತಿನಿಂದನೆ, ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ಯಂಕಪ್ಪ ತಳವಾರ ದೂರು ನೀಡಿದ್ದಾರೆ. ಈ ಕುರಿತು ನಾಲ್ವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತಿ ದೂರು
ಮಿಣಜಗಿ ಗ್ರಾಮದಲ್ಲಿ ಬಟ್ಟೆ ತೊಳೆಯಲೆಂದು ಹೋಗಿದ್ದ ಮಹಿಳೆಯೊಬ್ಬರೊಂದಿಗೆ ಅದೇ ಗ್ರಾಮದ ಕಾಶೀನಾಥ ತಳವಾರ ಎಂಬಾತ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿ ಅವರ ಸಂಬಂಧಿಕರಿಗೆ ಮಹಿಳೆ ತಿಳಿಸಿದ್ದಾಳೆ. ಈ ವಿಷಯವಾಗಿ ನಾಲ್ಕೈದು ಜನ ಕಾಶೀನಾಥನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಅಲ್ಲದೆ, ಮಹಿಳೆಯೊಂದಿಗೆ ಅಸಭ್ಯ ವರ್ತನೆ ತೋರಿದ್ದಾನೆ ಎಂದು ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಅಧಿಕಾರಿಗಳ ಭೇಟಿ
ತನಿಖಾಧಿಕಾರಿ ಡಿವೈಎಸ್ಪಿ ಶಾಂತವೀರ ಹಾಗೂ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ ಅರಸಿದ್ಧಿ ಅವರು ಭಾನುವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು, ಪ್ರತಿದೂರು ದಾಖಲಾಗಿವೆ. ಪ್ರಕರಣದ ಸಮಗ್ರ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net