

ವಿಜಯಪುರ: ಮಹಾಮಾರಿ ಕರೊನಾ ಪ್ರಮಾಣ ದಿನೇ ದಿನೇ ಏರಿಕೆಯಾಗುತ್ತಿದ್ದು ಭಾನುವಾರ ಮತ್ತೆ 20 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಈ ನಿಟ್ಟಿನಲ್ಲಿ ವ್ಯಾಪಕ ಜಾಗೃತಿಗೆ ಮುಂದಾಗಿರುವ ಜಿಲ್ಲಾಡಳಿತ ಬಣ್ಣದ ಚಿತ್ತಾರದ ಮೂಲಕ ಗಮನ ಸೆಳೆಯುತ್ತಿದೆ. ಜಿಲ್ಲಾಡಳಿತ ಕಚೇರಿ ಆವರಣದಲ್ಲೆಲ್ಲಾ ಕರೊನಾ ನಿಯಂತ್ರಣ ಹಾಗೂ ಮುಂಜಾಗೃತೆಗೆ ಸಂಬಂಧಿಸಿದ ಕಲಾಕೃತಿ ಬಿಡಿಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲಾಡಳಿತ ಆವರಣವೀಗ ರಂಗು ರಂಗಾಗಿದ್ದು ಎಲ್ಲಿ ನೋಡಿದರೂ ಕರೊನಾ ಕುರಿತ ಬಣ್ಣದ ಚಿತ್ತಾರ ಕಾಣಿಸುತ್ತಿದೆ. ಮಾಸ್ಕ್ ಧರಿಸದಿದ್ದರೆ ದಂಡ, ಮಾಸ್ಕ್ ಧರಿಸಿ ಕರೊನಾ ಓಡಿಸಿ ಎಂಬಿತ್ಯಾದಿ ಜಾಹೀರಾತುಗಳು ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ಕಾಣಿಸುತ್ತಿವೆ.
ಕಳೆದೊಂದು ವಾರದಿಂದ ಕರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು ಭಾನುವಾರ ವಿಜಯಪುರ-11, ಬ.ಬಾಗೇವಾಡಿ-1, ಇಂಡಿ-4, ಮುದ್ದೇಬಿಹಾಳ-4 ಪ್ರಕರಣಗಳು ದಾಖಲಾಗಿವೆ. ಈವರೆಗೆ ಒಟ್ಟು 14798 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯ ಎಲ್ಲ ಕಡೆ ಲಸಿಕೆ ಅಭಿಯಾನಕ್ಕೆ ವೇಗ ನೀಡಲಾಗಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.