ವಿಜಯನಗರ 4ನೇ ಹಂತ ಸಮಗ್ರ ಅಭಿವೃದ್ಧಿಗೆ ಬದ್ಧ: ಶಾಸಕ ಜಿ.ಟಿ.ದೇವೇಗೌಡ ಭರವಸೆ

4
Published on

ಮೈಸೂರು: ವಿಜಯನಗರ 4ನೇ ಹಂತಕ್ಕೆ 2025ರೊಳಗೆ ಕಾವೇರಿ ನೀರನ್ನು ಕೊಡುವುದರೊಂದಿಗೆ ಸಮಗ್ರ ಅಭಿವೃದ್ಧಿ ಮಾಡಲು ಬದ್ಧನಾಗಿದ್ದೇನೆ ಎಂದು ಶಾಸಕ ಜಿ.ಟಿ.ದೇವೇಗೌಡ ಭರವಸೆ ನೀಡಿದರು.

ವಿಜಯನಗರದ 4ನೇ ಹಂತದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಭಾನುವಾರ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಕುಡಿಯುವ ನೀರಿನ ಸಮಸ್ಯೆ, ಕಸ ವಿಲೇವಾರಿ, ಚರಂಡಿ ವ್ಯವಸ್ಥೆ, ಕ್ರಿಡಾಂಗಣ, ರಸ್ತೆ ಡಾಬರೀಕರಣ, ಬೀದಿ ದೀಪ, ಬಸ್ ವ್ಯವಸ್ಥೆ, ಪಾರ್ಕ್ ಅಭಿವೃದ್ಧಿ, ಒಳ ಚರಂಡಿ ಸಮಸ್ಯೆ ನನ್ನ ಗಮನಕ್ಕೆ ಬಂದಿದ್ದು, ಈ ಬಡಾವಣೆಯ ಸಮಸ್ಯೆ ನನಗೆ ಗೊತ್ತಿದೆ ಎಂದರು.

ಕೆಆರ್‌ಎಸ್ ಹಿನ್ನೀರಿನ ಹುಂಡವಾಡಿಯಿಂದ ನೀರು ತರಲು ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದೆ. 26 ಟ್ಯಾಂಕ್‌ಗಳನ್ನು ನಿರ್ಮಿಸುತ್ತಿದ್ದು, ನೆಲ ಟ್ಯಾಂಕ್ ತುಂಬಿಸಿ ದಿನ ಬಿಟ್ಟು ದಿನ ನೀರು ಕೊಡುತ್ತೇವೆ. ಈ ತಿಂಗಳಲ್ಲಿ ಬಡಾವಣೆಯ ಸ್ವಚ್ಛತೆ ಮಾಡಿಸಲಾಗುವುದು. ಹಿರಿಯ ನಾಗರಿಕರ ಸಂಘದವರು ಕೋರ್ಟ್‌ನಲ್ಲಿರುವ ಪ್ರಕಣವನ್ನು ಹಿಂದಕ್ಕೆ ಪಡೆದ ತಕ್ಷಣ ಹೋಟಗಳ್ಳಿ ನಗರ ಸಭೆಯಿಂದ 10 ಕೋಟಿ ರೂ. ವೆಚ್ಚದಲ್ಲಿ ಉದ್ಯಾನ, ಒಳ ಚರಂಡಿ, ರಸ್ತೆ ಡಾಂಬರೀಕರಣ ಮಾಡಲಾಗುವುದು ಎಂದರು.

ಈಗಾಗಲೇ ಪಿಡಬ್ಲೂೃಡಿಯಿಂದ ಜೋಡಿ ರಸ್ತೆ ಮಾಡಲಾಗಿದೆ. ಅನ್ನಪೂರ್ಣೇಶ್ವರಿ ದೇವಸ್ಥಾನ ನಿರ್ಮಾಣಕ್ಕೆ ಸಹಕಾರ ನೀಡಿದ್ದೇನೆ. ಇನ್ನು ಒಂದು ವಾರದಲ್ಲಿ ಜಿಲ್ಲಾಧಿಕಾರಿ, ನಗರಸಭೆ ಆಯುಕ್ತರು, ಇಂಜಿನಿಯರ್‌ಗಳನ್ನು ಬಡಾವಣೆಗೆ ಕರೆಸಿ ನಿಮ್ಮೆಲ್ಲರ ಸಮ್ಮುಖದಲ್ಲಿ ಸಭೆ ಮಾಡಲಾಗುವುದು. ಖಾತೆ, ಕಂದಾಯ ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಿ ಸಮಸ್ಯೆ ಬಗೆಹರಿಸುತ್ತೇನೆ. ಮೈಸೂರನ್ನು ಬೃಹತ್ ಮಹಾನಗರ ಪಾಲಿಕೆ ಮಾಡಲು ಮುಖ್ಯಮಂತ್ರಿ ಸಿದ್ಧರಾಮಯ್ಯರವರಿಗೆ ಮನವಿ ಮಾಡಿದ್ದೇನೆ ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಕೆ. ವಿವೇಕಾನಂದ, ವಿಜಯನಗರದ 4ನೇ ಹಂತದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಎಚ್.ಎನ್. ರಾಮಕೃಷ್ಣೇಗೌಡ, ಉಪಾಧ್ಯಕ್ಷ ಎಸ್.ಜಿ. ಶಿವಣ್ಣೇಗೌಡ, ಪ್ರಧಾನ ಕಾರ್ಯದರ್ಶಿ ಡಾ.ಎಂ.ಜೆ. ಆನಂದ್, ಖಜಾಂಚಿ ಹರೀಶ್, ಹೂಟಗಳ್ಳಿ ನಗರ ಸಭೆ ಎಇಇ ಮಧುಸೂಧನ್, ಶಾಸಕರ ಆಪ್ತ ಸಹಾಯಕ ಹನುಮೇಶ್, ನಿರ್ದೇಶಕರಾದ ಬೆಳವಾಡಿ ಶಿವಕುಮಾರ ಸ್ವಾಮಿ, ಬಿ.ಎಲ್.ಮಂಜುನಾಥ್, ಡಾ.ಟಿ.ರಾಜು, ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಚಲುವೇಗೌಡ, ರಂಗೇಗೌಡ, ಮುಖಂಡ ಎಸ್.ಮಂಜುನಾಥ್, ಸಂಘದ ಪದಾಧಿಕಾರಿಗಳು ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net