

ಶೃಂಗೇರಿಯ ಶಂಕರಾಚಾರ್ಯ ಮಹಾಸಂಸ್ಥಾನದ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ಅವರ ವಿಜಯ ಯಾತ್ರೆ ಕಾರ್ಯಕ್ರಮ ಮಾ. 21ರಿಂದ ಮಾ. 25 ರವರೆಗೆ ನಗರದ ಯಾಲಕ್ಕಿಶೆಟ್ಟರ್ ಕಾಲನಿಯ ಶೃಂಗೇರಿ ಶಂಕರಮಠದಲ್ಲಿ ನಡೆಯಲಿದೆ ಎಂದು ಶಾಂಕರ ತತ್ವ ಅಭಿಯಾನ ಜಿಲ್ಲಾ ಘಟಕದ ಅಧ್ಯಕ್ಷ ರವಿ ದೇಶಪಾಂಡೆ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 21ರಂದು ಸಂಜೆ 5.30ಕ್ಕೆ ರ್ಪೂಣಕುಂಭ ದೊಂದಿಗೆ ಶ್ರೀಗಳನ್ನು ಸ್ವಾಗತಿಸಲಾಗುವುದು. ಬಳಿಕ ಮಂಗಳ ವಾದ್ಯ, ವೇದಘೋಷ, ಅಲಂಕೃತ ವಾಹನದೊಂದಿಗೆ ಮೆರವರಣಿಗೆ ಜರುಗಲಿದೆ. ಧೂಳಿ ಪಾದಪೂಜೆ, ಪ್ರಾರ್ಥನೆ, ಶಂಕರ ನಮನ ನಡೆಯಲಿವೆ. ರಾತ್ರಿ 8.30ಕ್ಕೆ ಶ್ರೀಗಳು ಶಾರದಾ ಚಂದ್ರಮಾಳೀಶ್ವರ ಪೂಜೆ ನೆರವೇರಿಸುವರು ಎಂದರು.
ಮಾ. 22ರಂದು ಬೆಳಗ್ಗೆ 7.30ಕ್ಕೆ ಶ್ರೀ ಶಾರದಾ ಚಂದ್ರಮೌಳೀಶ್ವರ ಪೂಜೆ, ಸಹಸ್ರ ಮೋದಕ ಹವನ, ಶತಚಂಡಿ ಹೋಮ ಆರಂಭಗೊಳ್ಳಲಿದೆ. ಸುವರ್ಣ ಭಾರತೀ ಮಹೋತ್ಸವದ ಅಡಿ ಶ್ರೀ ಬಾಲಭಾರತಿ ಸ್ತೋತ್ರ ಸಮರ್ಪಣೆ ನೆರವೇರಲಿದೆ. ನಂತರ ಶ್ರೀಗಳ ದರ್ಶನ, ಪಾದಪೂಜೆ, ಭಿಕ್ಷಾ, ಸಹಸ್ರ ಮೋದಕ ಗಣಪತಿ ಹವನದ ಪೂರ್ಣಾಹುತಿ ಜರುಗಲಿದೆ. ಸಂಜೆ 5.30ಕ್ಕೆ ಭಜ ಗೋವಿಂದಮ್ ಹಾಗೂ ಶಂಕರಾಚಾರ್ಯರ ಜೀವನ ಕುರಿತು ರೂಪಕ, ಸಂಸ್ಮರಣೆ ನಡೆಯಲಿದೆ ಎಂದರು.
ಮಾ. 23ರಂದು ಬೆಳಗ್ಗೆ 7.30ಕ್ಕೆ ಶಾರದಾ ಚಂದ್ರಮೌಳೀಶ್ವರ ಪೂಜೆ, ಶತಚಂಡಿ ಯಾಗ, ಶಾರದಾ ಪರಮೇಶ್ವರಿದೇವಿಗೆ ಪಂಚಾಮೃತ ಅಭಿಷೇಕ ಸಮರ್ಪಣೆ, 10 ಗಂಟೆಗೆ ನೂತನವಾಗಿ ನಿರ್ಮಿಸಿದ ರಥ ಶ್ರೀಗಳಿಂದ ಸಮರ್ಪಣೆ ಆಗಲಿದೆ. 12.30ಕ್ಕೆ ಶತಚಂಡಿ ಪೂರ್ಣಾಹುತಿ ನಡೆಯಲಿದೆ. ಸಂಜೆ 5 ಗಂಟೆಗೆ ಗುರುವಂದನೆ, ಶ್ರೀಗಳಿಂದ ಆಶೀರ್ವಚನ ಜರುಗಲಿದೆ ಎಂದರು.
ಮಾ. 24ರಂದು 8 ಗಂಟೆಗೆ ಮಹಾರುದ್ರಯಾಗ, 9 ಗಂಟೆಗೆ ವಿದ್ವಾಂಸರಿಂದ ವೇದಗೋಷ್ಠಿ, 11:30 ಗಂಟೆಗೆ ಸಚ್ಚಿದಾನಂದ ಶಿವಾಭಿನವ ನರಸಿಂಹಭಾರತಿ ಜಯಂತಿ, 12.30ಕ್ಕೆ ಮಹಾರುದ್ರಯಾಗದ ಪೂರ್ಣಾಹುತಿ ನೆರವೇರಲಿದೆ. ಮಾ.25ರಂದು ತ್ರಿವೇಣಿ ಮಹಾಸ್ತೋತ್ರ ಸಮರ್ಪಣೆ ಇರಲಿದೆ ಎಂದರು.
ಶಂಕರಮಠದ ವ್ಯವಸ್ಥಾಪಕ ವಿಠ್ಠಲ ಶೆಟ್ಟಿ, ಮಹೇಶ ಮಳಗಿ, ಪುರುಷೋತ್ತಮ ಕುಲಕರ್ಣಿ, ಇತರರು ಇದ್ದರು.