ವಿಚಾರಣೆಗೆ ಸಿಎಂ ಹಾಜರಾಗಬೇಕಾಗುತ್ತದೆ

satish jarakiholi
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ವಿಚಾರಣೆಗೆ ಖುದ್ದು ಹಾಜರಾಗಲು ಸಿಎಂ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತ ನೋಟಿಸ್ ಜಾರಿ ಮಾಡಿದ್ದು, ಅವರು ಹಾಜರಾಗಬೇಕಾಗುತ್ತದೆ ಎಂದು ಲೋಕೋಪಯೋಗಿ ಸಚಿವ ಸಚಿವ ಸತೀಶ ಜಾರಕಿಹೊಳಿ ಅಭಿಪ್ರಾಯಿಸಿದರು.

ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತದಿಂದ ನೋಟಿಸ್ ಜಾರಿಯಾದಾಗ ಯಾರೇ ಆದರೂ ಹಾಜರಾಗಲೇಬೇಕು. ಲೋಕಾಯುಕ್ತ ಎಲ್ಲದಕ್ಕಿಂತಲೂ ದೊಡ್ಡದು ಎಂದರು.

ನೋಟಿಸ್​ನಲ್ಲಿ ಖುದ್ದು ಹಾಜರಾಗಿ ಎಂದು ಸಹಜವಾಗಿಯೇ ಇರುತ್ತದೆ. ಸಿಎಂ ಅವರು ಖುದ್ದು ಹಾಜರಾಗಬಹುದು ಅಥವಾ ತಮ್ಮ ಪರವಾಗಿ ವಕೀಲರನ್ನು ಕಳಿಸಬಹುದು. ಇಲ್ಲವೇ ಹಾಜರಾಗಲು ಕೆಲ ಸಮಯ ತೆಗೆದುಕೊಳ್ಳಬಹುದು ಎಂದು ಪ್ರತಿಕ್ರಿಯೆ ನೀಡಿದರು.

ಶಿಗ್ಗಾಂವಿ ವಿಧಾನಸಭೆ ಉಪ ಚುನಾವಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು ಇಂದು ಹುಬ್ಬಳ್ಳಿಯಲ್ಲಿ ಸಭೆ ನಡೆಸಿಲ್ಲ. ಎಲ್ಲರಿಗೂ ಅವರವರ ಜವಾಬ್ದಾರಿ ಬಗ್ಗೆ ತಿಳಿಸಿದ್ದೇವೆ. ಇಂದಿನಿಂದ ಎಲ್ಲ ನಾಯಕರು ಪಾಲ್ಗೊಳ್ಳಲಿದ್ದಾರೆ. ಪ್ರಚಾರ ಕಾರ್ಯ ಮತ್ತಷ್ಟು ಚುರುಕುಗೊಳ್ಳಲಿದೆ ಎಂದರು.

ಚುನಾವಣೆ ಪ್ರಚಾರ ಮುಗಿಯುವವರೆಗೂ ಸಚಿವರು, ಶಾಸಕರು, ಮುಖಂಡರು ಶಿಗ್ಗಾಂವಿಯಲ್ಲಿಯೇ ಇರಬೇಕೆಂದು ಸಿಎಂ ಸೂಚನೆ ನೀಡಿದ್ದಾರೆ. ಇವತ್ತಿನಿಂದ ಎಲ್ಲರೂ ಪ್ರಚಾರದಲ್ಲಿ ಧುಮುಕುತ್ತಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net