ವಿಜಯವಾಣಿ ಸುದ್ದಿಜಾಲ ಆನೇಕಲ್
ರಾಜಾಪುರದಲ್ಲಿ ಪಾಕಿಸ್ತಾನಿ ಪ್ರಜೆಗಳ ಬಂಧನ ನಂತರ ಜಿಗಣಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, 4 ತಂಡ ರಚಿಸಲಾಗಿದೆ.
ಪಾಕಿಸ್ತಾನಿ ಪ್ರಜೆಗಳ ಬಂಧನ ಆಗಿ ಮೂರು ದಿನ ಕಳೆದಿದ್ದು, ಆರೋಪಿಗಳಿಂದ ಹಲವು ಮಾಹಿತಿ ಕಲೆ ಹಾಕಿರುವ ಪೊಲೀಸರು, ಆರೋಪಿಗಳ ಸಂಪರ್ಕದಲ್ಲಿರುವವರ ಬಂಧನಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಜಿಗಣಿ ಇನ್‌ಸ್ಪೆಕ್ಟರ್ ಮಂಜುನಾಥ್, ಬನ್ನೇರುಘಟ್ಟ ಇನ್‌ಸ್ಪೆಕ್ಟರ್ ಕೃಷ್ಣಕುಮಾರ್, ಅತ್ತಿಬೆಲೆ ಇನ್‌ಸ್ಪೆಕ್ಟರ್ ರಾಘವೇಂದ್ರ ಹಾಗೂ ಸರ್ಜಾಪುರ ಠಾಣೆ ಇನ್‌ಸ್ಪೆಕ್ಟರ್ ನವೀನ್‌ಕುಮಾರ್ ತಂಡ ದೆಹಲಿ, ಚೆನ್ನೈ, ಬೆಳಗಾವಿ, ಮುಂಬೈ ಸೇರಿ ಹಲವೆಡೆ ಹುಡುಕಾಟ ನಡೆಸಿದ್ದಾರೆ.
ಪಾಕ್ ಪ್ರಜೆಗಳಿಗೆ ನಕಲಿ ಆಧಾರ್ ಮಾಡಿಕೊಟ್ಟವರು ಯಾರು? ಯಾರ‌್ಯಾರ ಜತೆ ಮೊಬೈಲ್ ಮೂಲಕ ಮಾತನಾಡಿದ್ದಾರೆ ಎಂಬುವ ಮಾಹಿತಿ ಕಲೆ ಹಾಕುವ ನಿಟ್ಟಿನಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಪೊಲೀಸರ ತನಿಖೆಯ ವೇಳೆ ಬಂಧಿತ ಪಾಕಿಸ್ತಾನದ ಪ್ರಜೆ ರಶೀದ್ ಅಲಿ ಸಿದ್ದಿಕಿ, ಮೆಹದಿ ಫೌಂಡೇಶನ್ ಧರ್ಮ ಗುರು ಯೂನಸ್ ಅಲ್ಗೋರ್ ಅವರ ಧರ್ಮ ಪ್ರಚಾರಕ್ಕೆ ಪ್ರೇರೇಪಿತನಾಗಿದ್ದ, ದೇಶದಾದ್ಯಂತ ಗುರುವಿನ ಧರ್ಮ ಪ್ರಚಾರ ಮಾಡಲು ಮುಂದಾಗಿದ್ದ, ಈತ ಚೆನ್ನೈ ಅಧಿಕಾರಿಗಳು ಬಂಧನ ಮಾಡಿರುವ ಅಲ್ತಾಫ್ ಮೂಲಕ
ಬೆಂಗಳೂರಿಗೆ ಬಂದು ನಂತರ ಮನೆ ಬಾಡಿಗೆ ಸೇರಿ ಖರ್ಚು ವೆಚ್ಚಗಳನ್ನು ಆತನೇ ನೋಡಿಕೊಳ್ಳುತ್ತಿದ್ದ ಎನ್ನುವ ಮಾಹಿತಿ ಗೊತ್ತಾಗಿದೆ. ಧರ್ಮ ಪ್ರಚಾರಕ್ಕೆ ಸಂಬಂಧಪಟ್ಟಂತೆ ಒಂದಷ್ಟು ಪತ್ರಗಳು ಹಾಗೂ ದಾಖಲೆಗಳನ್ನು ರಶೀದ್ ಅಲಿ ಸಿದ್ದಿಕಿ ತನ್ನ ಕಂಪ್ಯೂಟರ್‌ನಲ್ಲಿ ಸಂಗ್ರಹಿಸಿದ್ದ ಎನ್ನುವುದು ತನಿಖೆಯ ವೇಳೆ ಗೊತ್ತಾಗಿದ್ದು, ಇಡೀ ದೇಶದಲ್ಲಿ ಗುರುವಿನ ಧರ್ಮ ಪ್ರಚಾರ ಮಾಡುವುದೇ ಇವರ ಪ್ರಮುಖ ಗುರಿಯಾಗಿತ್ತು ಎನ್ನುವುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಅಕ್ರಮವಾಗಿ ಭಾರತಕ್ಕೆ ಬಂದು ನಕಲಿ ದಾಖಲೆ ಸೃಷ್ಟಿ ಮಾಡಿಕೊಂಡಿರುವ ಪಾಕಿಸ್ತಾನದ ಪ್ರಜೆಗಳ ತನಿಖೆ ಮುಂದುವರಿದಿದ್ದು, ಇನ್ನೂ ಹಲವರು ಇವರ ಜತೆ ಸಂಪರ್ಕದಲ್ಲಿ ಇದ್ದಾರೆ ಎನ್ನುವ ನಿಟ್ಟಿನಲ್ಲಿ
ತನಿಖೆ ಮುಂದುವರಿದಿದೆ.