ವಿಚಾರ ಪಾಲಕರು ನಿಜವಾದ ಅಂಬೇಡ್ಕರ್ ಅನುಯಾಯಿಗಳು:  ರಾಜರತ್ನ ಅಂಬೇಡ್ಕರ್

mysore
Published on

ಮೈಸೂರು: ಅಂಬೇಡ್ಕರ್ ಅವರ ವಿಚಾರಧಾರೆ ಪಾಲನೆ ಮಾಡುವವರು ನಿಜವಾದ ಅವರ ಅನುಯಾಯಿಗಳು ಎಂದು ಡಾ.ಬಿ.ಆರ್. ಅಂಬೇಡ್ಕರ್ ಮೊಮ್ಮಗ ರಾಜರತ್ನ ಅಂಬೇಡ್ಕರ್ ಹೇಳಿದರು.

ಮುಕ್ತಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಕರ್ನಾಟಕ ಸಮತಾ ಸೈನಿಕ ದಳದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹಾಪುರುಷರಿಗೆ ವಾರಸುದಾರರಿಲ್ಲ. ಅನುಯಾಯಿಗಳು ಮಾತ್ರ ಇರುತ್ತಾರೆ. ಅದೇ ರೀತಿ ಅಂಬೇಡ್ಕರ್ ಸಿದ್ಧಾಂತವನ್ನು ಅನುಸರಿಸುವ ಮೂಲಕ ಅವರ ಅನುಯಾಯಿಗಳು ಆಗಬೇಕು ಎಂದರು.

ದಲಿತರಿಗಾಗಿ ರಾಷ್ಟ್ರೀಯ ಮಾಧ್ಯಮ ಸಂಸ್ಥೆ, ವಿಶ್ವವಿದ್ಯಾಲಯ, ಆಸ್ಪತ್ರೆ ಇಲ್ಲ. ಸಮತಾ ಸೈನಿಕ ದಳದ ಮುಂದಿನ 150ನೇ ವರ್ಷ ಹೊತ್ತಿಗೆ ಮೈಸೂರಿನಲ್ಲೇ ಇದರಲ್ಲಿ ಒಂದಾದರೂ ನಿರ್ಮಾಣವಾಗಬೇಕು. ಆಗ ಮಾತ್ರ ನಾವುಗಳೆಲ್ಲ ಅವರ ಅನುಯಾಯಿಗಳು ಆಗಲು ಸಾಧ್ಯ ಎಂದು ಹೇಳಿದರು.

ನೂರು ವರ್ಷಗಳ ಹಿಂದೆಯೇ ಬಾಬಾ ಸಾಹೇಬ್ ಅವರು ಮಾಧ್ಯಮ ಸಂಸ್ಥೆ, ಸಂಘಟನೆ ಮತ್ತು ವ್ಯವಸ್ಥೆ ಕಟ್ಟಿದ್ದರು. ಆದರೀಗ ದಲಿತರ ಪರ ಇಂತಹವೊಂದು ವ್ಯವಸ್ಥೆ ಸೃಷ್ಟಿ ಮಾಡಲು ಏಕೆ ಸಾಧ್ಯವಾಗಿಲ್ಲ? ಎಂದು ಪ್ರಶ್ನಿಸಿದರು.

ಕರೊನಾದಿಂದ 2021ರಲ್ಲಿ ಅಂಬೇಡ್ಕರ್ ಜಯಂತಿ ಮಾಡಲಿಲ್ಲ. ಇದರಿಂದ ದೇಶದಲ್ಲಿ 21 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ವರದಿ ಹೇಳುತ್ತಿದೆ. ಅವರ ಜಯಂತಿಗಾಗಿ ಇಷ್ಟು ಖರ್ಚು ಮಾಡಲು ನಾವುಗಳು ಎಂದೂ ಯೋಚಿಸಲಿಲ್ಲ ಎಂದರು.

ದಲಿತರು ಯಾರನ್ನೂ ಅವಲಂಬಿಸಬಾರದು ಎಂಬುದು ಅಂಬೇಡ್ಕರ್ ಇಚ್ಛೆಯಾಗಿತ್ತು. ಆದರೀಗ ದಲಿತರ ಹಿತಕಾಯುವ ಸಂವಿಧಾನ ದುರ್ಬಲಗೊಳಿಸಿ, ಸರ್ಕಾರಿ ಸಂಸ್ಥೆಗಳೆಲ್ಲವನ್ನೂ ಹಾನಿ ಮಾಡಲಾಗುತ್ತಿದೆ.

ಇದು ಬಾಬಾ ಸಾಹೇಬರಿಗೆ ಮೊದಲೇ ಗೊತ್ತಿತ್ತು. ಹೀಗಾಗಿ ದಲಿತರ ಹಿತಾಸಕ್ತಿ ರಕ್ಷಣೆಗಾಗಿ ಅವರು ಸಂವಿಧಾನವೊಂದನ್ನೇ ಕೊಟ್ಟು ಹೋಗಿಲ್ಲ. ಬುದ್ಧ ಮಾರ್ಗವನ್ನೂ ಬಿಟ್ಟು ಹೋಗಿದ್ದಾರೆ. ಸಂವಿಧಾನ ನಮ್ಮನ್ನು ರಕ್ಷಣೆ ಮಾಡದಿದ್ದರೆ ಇದುವೇ ನಮ್ಮ ರಕ್ಷಣೆಗೆ ಬರಲಿದೆ ಎಂದರು.

ಬಾಬಾ ಸಾಹೇಬರು 1924ರಲ್ಲಿ ಸಮತಾ ಸೈನಿಕ ದಳ ಸ್ಥಾಪನೆ ಮಾಡಿದರು. ಈ ಸಂಘಟನೆಯನ್ನು ನಕಲು ಮಾಡಿಕೊಂಡು ಆರ್‌ಎಸ್‌ಎಸ್ ಬೆಳೆಯಿತು. ಸಮತಾ ಸೈನಿಕ ದಳದ ಸಂಘಟನೆಯನ್ನು ನೋಡಿ ಮನುವಾದದ ಚಿಂತನೆಯ ಸಂಸ್ಥೆಗಳು, ವಿಚಾರವನ್ನು ಕಟ್ಟಿಕೊಳ್ಳಲಾಯಿತು.

ಮನುವಾದವು ತನ್ನ ವಿರೋಧಿ ವಿಚಾರಧಾರೆ, ಮಹಾಪುರುಷರನ್ನು ಹಾನಿ ಮಾಡಲು ಸಾಧ್ಯವಾಗದಿದ್ದರೆ ಅದನ್ನೇ ಸ್ವಾಧೀನ ಪಡಿಸಿಕೊಂಡು ತಮ್ಮದು ಮಾಡಿಕೊಳ್ಳುತ್ತದೆ. ವಿಷ್ಣುವಿನ ಅವತಾರ ಎನ್ನುವ ಮೂಲಕ ಬುದ್ಧ, ಅಂಬೇಡ್ಕರ್ ಅವರನ್ನು ತಮ್ಮದಾಗಿಸಿಕೊಳ್ಳಲು ಹುನ್ನಾರ ನಡೆದಿದೆ. ಇದಕ್ಕೆ ಅವಕಾಶ ಕಲ್ಪಿಸಿಕೊಡಬಾರದು ಎಂದರು.

ಈಗಲೂ ಜಾತಿ ವಿನಾಶವಾಗಿಲ್ಲ. ಬದಲಿಗೆ ಇನ್ನಷ್ಟು ಉಪಜಾತಿ ಹುಟ್ಟಿಕೊಂಡಿವೆ. ಹೀಗಾದರೆ, ಜಾತಿ ನಾಶ ಸಾಧ್ಯವಾಗಲಿದೆಯೇ? ಎಂದು ಪ್ರಶ್ನಿಸಿದರು.

ಬುದ್ಧ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಂಘಪರಿವಾರ ಪಾಲನೆ ಮಾಡುತ್ತಿದೆ. ಈ ಮೂಲಕ ಮನುವಾದ ವ್ಯವಸ್ಥೆ, ವಿಚಾರಧಾರೆಯನ್ನು ನಿರ್ಮಿಸಿಕೊಳ್ಳಲಾಗುತ್ತಿಲ್ಲ. ಆದರೆ, ಬುದ್ಧ ವಿಚಾರವನ್ನು ದಲಿತರೇ ಪಾಲನೆ ಮಾಡುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ದೇವರ ಪೂಜೆಯಿಂದ ದಲಿತರ ವಿಮೋಚನೆಯಾಗುವುದಿಲ್ಲ. ಹೋರಾಟದಿಂದ ವಿಮೋಚನೆ ದೊರೆಯುತ್ತದೆ ಎಂದರು.

ಅಂಬೇಡ್ಕರ್ ಮತ್ತು ಸಂವಿಧಾನ ಮೇಲೆ ಗದಪ್ರಹಾರ ನಿಲ್ಲಿಸಬೇಕು. ನಿತ್ಯ ದಲಿತರು, ಅಲ್ಪಸಂಖ್ಯಾತರು, ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿವೆ. ಆದರೆ ಕೇಂದ್ರ ಸರ್ಕಾರ ಮೌನವಾಗಿದೆ. ಸಂಘ ಪರಿಹಾರ ಮತ್ತು ಕೇಂದ್ರ ಸರ್ಕಾರ ಬಹುಜನರನ್ನು ನಿರ್ಲಕ್ಷಿೃಸುತ್ತಿದೆ ಎಂದು ದೂರಿದರು.

ದೇಶದ ಮೂಲ ನಿವಾಸಿಗಳನ್ನು ಕೀಳಾಗಿ ಕಾಣಲಾಗುತ್ತಿದೆ. ಕೈ ಗಡಿಯಾರ ಕಟ್ಟಿದರೆ, ಕುದುರೆ ಮೇಲೆ ಏರಿದರೆ ದಲಿತರನ್ನು ಕೊಲೆ ಮಾಡಲಾಗುತ್ತಿದೆ. ಇಷ್ಟದರೂ ಮೀಸಲಾತಿಯಿಂದ ಚುನಾಯಿತರಾದವರು ಧ್ವನಿ ಎತ್ತುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ವಿಶ್ವ ಮೈತ್ರಿ ಬುದ್ಧ ವಿಹಾರದ ಡಾ.ಕಲ್ಯಾಣ ಸಿರಿ ಭಂತೇಜಿ, ಕರ್ನಾಟಕ ಸಮತಾ ಸೈನಿಕ ದಳದ ರಾಜ್ಯ ಘಟಕದ ಅಧ್ಯಕ್ಷ ಬಿ.ಚನ್ನಕೃಷ್ಣಪ್ಪ, ಮಹಿಳಾ ರಾಜ್ಯ ಘಟಕದ ಅಧ್ಯಕ್ಷೆ ಕಮಲಮ್ಮ, ಬಹುಜನ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಆರ್.ಎಂ.ಎನ್.ರಮೇಶ್, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್, ಭೀಮಾ ಪ್ರಜಾ ಸಂಘದ ಅಧ್ಯಕ್ಷ ಮುರಗೇಶ್, ರಂಗಕರ್ಮಿ ಜನಾದರ್ನ್ (ಜನ್ನಿ) ಇತರರಿದ್ದರು. ಇದಕ್ಕೂ ಮುನ್ನ, ಪುರಭವನದ ಅಂಬೇಡ್ಕರ್ ಪ್ರತಿಮೆಯಿಂದ ಮುಕ್ತಗಂಗೋತ್ರಿ ವರೆಗೆ ಮೆರವಣಿಗೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net