ವಿಘ್ನನಿವಾರಕನಿಗೆ ಭಕ್ತಿಯ ವಿದಾಯ

h1-Ganesh 2
Published on

ಹುಬ್ಬಳ್ಳಿ: ಕರೊನಾ ಮಹಾಮಾರಿಯ ಹಿನ್ನೆಲೆಯಲ್ಲಿ ಅತ್ಯಂತ ಸರಳ ರೀತಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಿಸಿದ ಹುಬ್ಬಳ್ಳಿ ಜನರು 11 ದಿನಗಳ ಗಣಪನಿಗೆ ಮಂಗಳವಾರ ಭಕ್ತಿಯಿಂದ ವಿದಾಯ ಹೇಳಿದರು.

ನಗರದ ವಿವಿಧ ಬಡಾವಣೆ, ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪನೆಗೊಂಡಿದ್ದ ಗಣೇಶ ವಿಗ್ರಹಗಳಿಗೆ ವಿಶೇಷ ಪೂಜೆ ಸಲ್ಲಿಸಿ ಸಂಜೆ ವೇಳೆ ವಿಸರ್ಜನೆ ಮಾಡಲಾಯಿತು. ಡಿಜೆ, ಜಾಂಜ್ ಪಥಕ್, ಮೆರವಣಿಗೆ ಇಲ್ಲದೇ ವಾಹನಗಳಲ್ಲಿ ಗಣೇಶ ಮೂರ್ತಿ ಇಟ್ಟುಕೊಂಡು ಕಿತ್ತೂರ ಚನ್ನಮ್ಮ ವೃತ್ತದ ಮೂಲಕ ಸಾಗಿ ಗಾಜಿನ ಮನೆ ಆವರಣದ ಬಾವಿ ಹಾಗೂ ಹೊಸೂರ ಸರ್ಕಾರಿ ಶಾಲೆ ಬಳಿಯ ಹೊಂಡದಲ್ಲಿ ವಿಸರ್ಜನೆ ಮಾಡಲಾಯಿತು.

ಇಲ್ಲಿಯ ಸ್ಟೇಶನ್ ರಸ್ತೆ (ಚಂದ್ರಕಲಾ ಥೇಟರ್ ಬಳಿ) ಶ್ರೀ ಗಣೇಶೋತ್ಸವ ಮಂಡಳಿಯಲ್ಲಿ ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ಆಶ್ರಯದಲ್ಲಿ ಗಣೇಶ ವಿಗ್ರಹಗಳ ವಿಸರ್ಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಖ್ಯಾತ ವೈದ್ಯ ಡಾ. ವೀರಭದ್ರಪ್ಪ ಗಡಗಿ ಗಣೇಶ ವಿಸರ್ಜನೆ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಗಣೇಶನ ಪೂಜೆಯ ಮೂಲಕ ಕರೊನಾ ಕಾಯಿಲೆ ಬೇಗ ತೊಲಗಲಿ ಎಂದು ಹಾರೈಸಿದರು. ಅತಿಥಿಯಾಗಿದ್ದ ಮಜೇಥಿಯಾ ಫೌಂಡೇಶನ್ ಚೇರ್ಮನ್ ಜಿತೇಂದ್ರ ಮಜೇಥಿಯಾ ಮಾತನಾಡಿ, ಗಣೇಶ ಹಬ್ಬ ಭಾವೈಕ್ಯತೆಗೆ ಹೆಸರಾಗಿದೆ ಎಂದರು.

ಉದ್ಯಮಿ ರಾಜೀವ ಗಿಣಿಮಾವ, ಶ್ರೀನಿವಾಸ ಬೋಚಗೇರಿ, ಅಲ್ತಾಫ್ ಕಿತ್ತೂರ, ಶಾಂತರಾಜ ಪೋಳ, ಅಮರೇಶ ಹಿಪ್ಪರಗಿ, ಅಂದಾನಪ್ಪ ಹರದಾರಿ, ರೂಪಾ ಅಂಗಡಿ, ಅನಿಲ ಬೇವಿನಕಟ್ಟಿ, ಸಂಗೀತಾ ಇಜಾರದ, ಸರಸ್ವತಿ ಮೆಹರವಾಡೆ, ಮಹೇಶ ಪತ್ತಾರ ಇತರರು ಇದ್ದರು. ಕಾರ್ಯಕ್ರಮಕ್ಕೂ ಮೊದಲು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಎಸ್.ಎಸ್. ಕಮಡೊಳ್ಳಿಶೆಟ್ರ ಸ್ವಾಗತಿಸಿದರು. ಚನ್ನಬಸಪ್ಪ ಧಾರವಾಡಶೆಟ್ರ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net