

ಕೊಪ್ಪಳ: ಭಾರತೀಯ ಬಾಹ್ಯಕಾಶ ಸಂಸ್ಥೆ ವಿಕ್ರಮ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಸಿದ್ದಕ್ಕೆ ನಗರದಲ್ಲಿ ಸಾರ್ವಜನಿಕರು ಬುಧವಾರ ಹರ್ಷ ವ್ಯಕ್ತಪಡಿಸಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಖುಷಿಯಿಂದ ಸಂಭ್ರಮಿಸಿದರು.
ಬಾಹ್ಯಾಕಾಶ ವಿಜ್ಞಾನದಲ್ಲಿ ಇಸ್ರೋದ ಮಹತ್ವದ ಸಾಧನೆಗೆ ವಿಶ್ವವೇ ಮೆಚ್ಚಿಕೊಂಡಿದೆ. ಜಿಲ್ಲೆಯಲ್ಲೂ ವಿವಿಧ ಶಾಲಾ-ಕಾಲೇಜು, ಸಂಘ, ಸಂಸ್ಥೆಗಳಲ್ಲಿ ಲ್ಯಾಂಡಿಂಗ್ ಕಾರ್ಯವನ್ನು ಟಿವಿ, ಮೊಬೈಲ್ ಮೂಲಕ ವೀಕ್ಷಿಸಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ಬಿಜೆಪಿ ಕಾರ್ಯಕರ್ತರು ನಗರದ ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ, ಇಸ್ರೋ ವಿಜ್ಞಾನಿಗಳು ಹಾಗೂ ದೇಶದ ಪರವಾಗಿ ಜಯ ಘೋಷ ಕೂಗಿದರು. ಪಕ್ಷದ ಕಚೇರಿಯಲ್ಲಿ ರಾಷ್ಟ್ರಗೀತೆ ಹಾಡಿ ಗೌರವ ಸಲ್ಲಿಸಿದರು.
ಕಲ್ಯಾಣ ಕರ್ನಾಟಕ ಬಳಗದಿಂದ ನಗರದ ನಗರಸಭೆ ಮುಂಭಾಗದಲ್ಲಿ ಯುವಕರು ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು. ಅಲ್ಲದೇ ಕೇಕ್ ಕತ್ತರಿಸಿ ಪರಿಸ್ಪರ ಹಂಚಿಕೊಂಡು ಶುಭಾಶಯ ಕೋರಿದರು. ಭಾರತ ಚಂದ್ರನ ದಕ್ಷಿಣ ಧ್ರುವದಲ್ಲಿ ಹೆಜ್ಜೆ ಗುರುತು ಮೂಡಿಸಿದ್ದಕ್ಕೆ ಕೇಕೆ ಹಾಕಿ ಖುಷಿಪಟ್ಟರು.
ನಗರದ ಸಿಪಿಎಸ್ ಶಾಲೆಯಲ್ಲಿ ವಿಶೇಷ ಪೂಜೆ ಸಲ್ಲಿಸುವ ಜತೆಗೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಚಂದ್ರಯಾನಕ್ಕೆ ಶುಭ ಕೋರಿದರು. ಶಾಲೆಯ ಮುಖ್ಯ ಶಿಕ್ಷಕ ಎಂ.ಡಿ.ಗುಲಾಮ ಹುಸೇನ್, ಶಿಕ್ಷಕರಾದ ಬೀರಪ್ಪ ಅಂಡಗಿ, ಆಬೀದ ಹುಸೇನ ಅತ್ತಾರ, ಕಾಶಿನಾಥ ಸಿರಿಗೇರಿ, ಮಲ್ಲಿಕಾರ್ಜುನ ಹ್ಯಾಟಿ, ನಾಗಪ್ಪ ನರಿ, ಶೀಲಾ ಬಂಡಿ, ಶಂಕ್ರಮ್ಮ ಶೆಟ್ಟರ್, ಜಯಶ್ರೀ ದೇಸಾಯಿ ಇತರರಿದ್ದರು.