ವಿಕೃತ ಮನಸ್ಸಿನವರಿಗೆ ಕಠಿಣ ಶಿಕ್ಷೆ ಆಗಲೇಬೇಕು

13 vikram 1
Published on

ಧಾರವಾಡ: ಅತ್ಯಾಚಾರಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ತಾಲೂಕಿನ ಬೋಗೂರ ಹಾಗೂ ಮಾದನಬಾವಿ ಗ್ರಾಮದ ಅಪ್ರಾಪ್ತೆಯರ ಮನೆಗಳಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಆರ್. ಪ್ರಮೀಳಾ ನಾಯ್ಡು ಗುರುವಾರ ಭೇಟಿ ನೀಡಿ, ಕುಟುಂಬಸ್ಥರ ಅಳಲು ಆಲಿಸಿ, ಆತ್ಮಸ್ಥೈರ್ಯ ತುಂಬಿದರು.

ಬೋಗೂರ ಗ್ರಾಮದ ಬಾಲಕಿ ಮನೆಗೆ ತೆರಳಿ ಪಾಲಕರೊಂದಿಗೆ ಮಾತನಾಡಿ, ಘಟನೆಯ ಸಂಪೂರ್ಣ ಮಾಹಿತಿ ಪಡೆದರು. ಅವರು ಮಾಹಿತಿ ಕೇಳುತ್ತಿದ್ದಂತೆಯೇ ಬಾಲಕಿ ತಾಯಿ ಕಣ್ಣೀರು ಸುರಿಸುತ್ತ, ಇನ್ನೂ ಓದಿ ಬೆಳೆಯ ಬೇಕಾದ ಮಗಳನ್ನು ಕಳೆದುಕೊಂಡಿದ್ದೇವೆ. ಆಕೆಯ ಈ ಸ್ಥಿತಿಗೆ ಕಾರಣರಾದವರಿಗೆ ಗಲ್ಲು ಶಿಕ್ಷೆಯೇ ಆಗಬೇಕು ಎಂದು ಅಳಲು ತೋಡಿಕೊಂಡರು.

ಮುಂದಿನ ದಿನಗಳಲ್ಲಿ ಆರೋಪಿಯ ಕುಟುಂಬದಿಂದ ಸಹ ತೊಂದರೆ ಆಗುವ ಭಯವಿದೆ. ಹೀಗಾಗಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರಮೀಳಾ ನಾಯ್ಡು, ಕುಟುಂಬಸ್ಥರು ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ. ಮಹಿಳಾ ಆಯೋಗ, ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಸದಾ ನಿಮ್ಮೊಂದಿಗೆ ಇರುತ್ತದೆ. ಕುಟುಂಬದ ರಕ್ಷಣೆಗೆ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದರು.

ನಂತರ ಆರ್. ಪ್ರಮೀಳಾ ನಾಯ್ಡು ಮಾತನಾಡಿ, ಜಿಲ್ಲೆಯ 2 ಗ್ರಾಮಗಳಲ್ಲಿ ಇಂತಹ ಅಮಾನವೀಯ ಕೃತ್ಯ ನಡೆದಿರುವುದು ಖಂಡನೀಯ. ಇಂತಹ ಕೃತ್ಯಗಳನ್ನು ನಡೆಸುವ ವಿಕೃತ ಮನಸ್ಸಿನವರಿಗೆ ಕಠಿಣ ಶಿಕ್ಷೆಯಾಗಬೇಕು. ಮಹಿಳಾ ಆಯೋಗ ಹಾಗೂ ಅಧಿಕಾರಿಗಳು ನೊಂದ ಕುಟುಂಬಗಳಿಗೆ ಸದಾ ಬೆಂಗಾವಲಾಗಿರುತ್ತದೆ ಎಂದರು.

ಮುಂದಿನ ದಿನಗಳಲ್ಲಿ ಅವರು ನಡೆಸುವ ಹೋರಾಟಕ್ಕೆ ಯಾವ ರೀತಿಯಲ್ಲಿ ಬೆಂಬಲ ನೀಡಬೇಕು ಎಂಬುದನ್ನು ರ್ಚಚಿಸಲಾಗುವುದು. ಇದಲ್ಲದೆ ಸೂಕ್ತ ಕಾನೂನು ಅರಿವು, ಆಪ್ತ ಸಮಾಲೋಚನೆ ನಡೆಸುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬಲಾಗುವುದು. ಕುಟುಂಬದ ಸದಸ್ಯರಿಗೆ ಭದ್ರತೆ ಒದಗಿಸುವ ಕುರಿತು ಪೊಲೀಸರಿಗೆ ಮನವಿ ಮಾಡಲಾಗಿದೆ ಎಂದರು.

ಬೋಗೂರ ಗ್ರಾಮದ ಬಾಲಕಿಯ ಕುಟುಂಬದ ತುರ್ತು ವೆಚ್ಚವಾಗಿ 10 ಸಾವಿರ ರೂ. ನೆರವಿನ ಚೆಕ್ ಅನ್ನು ಆಯೋಗದ ವತಿಯಿಂದ ನೀಡಲಾಯಿತು.

ಮಾಜಿ ಶಾಸಕಿ ಸೀಮಾ ಮಸೂತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಶೆಟ್ಟರ್, ಡಿವೈಎಸ್​ಪಿ ರವಿ ನಾಯಕ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರಾಜೇಶ್ವರಿ ಸಾಲಗಟ್ಟಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಲಲಿತಾ, ರಾಜೇಶ್ವರಿ ಅಳಗವಾಡಿ, ಸಿಪಿಐ ಎಸ್.ಸಿ. ಪಾಟೀಲ, ಪಿಎಸ್​ಐ ಪ್ರಸಾದ ಫಣಿಕರ್, ಇತರರು ಇದ್ದರು.

2 ದಿನಗಳಲ್ಲಿ ಆರೋಪಿಗಳ ಬಂಧನ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಮಾತನಾಡಿ, ನೊಂದ ಕುಟುಂಬದ ಭದ್ರತೆಯ ಜವಾಬ್ದಾರಿ ಪೊಲೀಸ್ ಇಲಾಖೆಗೆ ಸೇರಿದೆ. ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಿಗೆ ಆಸ್ಪದ ನೀಡುವುದಿಲ್ಲ. ಮಾದನಭಾವಿ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಒಬ್ಬನನ್ನು ಬಂಧಿಸಲಾಗಿದೆ. ಇನ್ನೋರ್ವನ ಹುಡುಕಾಟ ನಡೆದಿದೆ. ಆತನ ಮನೆಯಲ್ಲೂ ಶೋಧ ಕಾರ್ಯ ನಡೆಸಿದ್ದು, ಇನ್ನು 2 ದಿನಗಳಲ್ಲಿ ಆತನನ್ನು ಬಂಧಿಸಲಾಗುವುದು ಎಂದರು.

ಸಂತ್ರಸ್ತರು ಆತ್ಮಹತ್ಯೆಗೆ ಶರಣಾಗಬಾರದು

ಹುಬ್ಬಳ್ಳಿ: ದೌರ್ಜನ್ಯ ಅಥವಾ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯರು ಖಿನ್ನತೆಯಿಂದ ಆತ್ಮಹತ್ಯೆಗೆ ಶರಣಾಗುತ್ತಿರುವುದು ಕಳವಳಕಾರಿ ಸಂಗತಿ. ಅದನ್ನು ತಪ್ಪಿಸಲು ಹಾಗೂ ಅವರಲ್ಲಿ ಆತ್ಮಸ್ಥೈರ್ಯ ತುಂಬಲು ಜಿಲ್ಲಾ ಮಟ್ಟದಲ್ಲಿ ಸಮಿತಿ ಇದ್ದು, ಅದನ್ನು ಇನ್ನಷ್ಟು ಬಲಪಡಿಸಲಾಗುವುದು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಆರ್. ಪ್ರಮೀಳಾ ನಾಯ್ಡು ತಿಳಿಸಿದರು.

ಗುರುವಾರ ಧಾರವಾಡದ ಬೋಗೂರ, ಮಾದನಬಾವಿಗೆ ಭೇಟಿ ನೀಡಿ ನಂತರ ನಗರದ ಸರ್ಕ್ಯೂಟ್ ಹೌಸ್​ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಸಂತ್ರಸ್ತರು, ಅವರ ಕುಟುಂಬದವರು ದೌರ್ಜನ್ಯದ ವಿರುದ್ಧ ಕಾನೂನು ಹೋರಾಟ ನಡೆಸಿ ನ್ಯಾಯ ಪಡೆದುಕೊಳ್ಳಬೇಕು. ಹಲವಾರು ಸಂತ್ರಸ್ತೆಯರು ನವ ಜೀವನ ರೂಪಿಸಿಕೊಂಡಿದ್ದಾರೆ. ಇಂತಹ ಪ್ರಕರಣಗಳಲ್ಲಿ ಪೋಷಕರು ಧೃತಿಗೆಡದೆ ಧೈರ್ಯ ತುಂಬಬೇಕು ಎಂದರು.

ಸಂತ್ರಸ್ತರ ನೆರವಿಗಾಗಿ ಜಿಲ್ಲಾ ಮಟ್ಟದಲ್ಲಿ ಒಂದೇ ಸೂರಿನಡಿ ಎಲ್ಲ ಸೌಲಭ್ಯ ಸಿಗುವ ಸಮಿತಿ ರಚಿಸಲಾಗಿದೆ. ಅಲ್ಲಿ ವೈದ್ಯಕೀಯ, ಪೊಲೀಸ್, ಮಾನಸಿಕ ತಜ್ಞರು, ಆಪ್ತ ಸಮಾಲೋಚಕರು ಸ್ಥಳದಲ್ಲಿಯೇ ಅವರಿಗೆ ನೆರವು ನೀಡಲಿದ್ದಾರೆ. ಬೋಗೂರ ಹಾಗೂ ಮಾದನಬಾವಿ ಪ್ರಕರಣಗಳಲ್ಲಿ ಪೊಲೀಸ್ ಇಲಾಖೆ ತನ್ನ ಕರ್ತವ್ಯ ಪ್ರಾಮಾಣಿಕಾಗಿ ಮಾಡಿದೆ. ಸಂತ್ರಸ್ತ ಕುಟುಂಬದೊಂದಿಗೆ ಸರ್ಕಾರ, ಆಯೋಗ ಹಾಗೂ ಜಿಲ್ಲಾಡಳಿತ ಇದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಲಾಗುವುದು ಎಂದರು.

ಲೈಂಗಿಕ ಅಲ್ಪಸಂಖ್ಯಾತರ ಅರ್ಜಿಗಳನ್ನು ವಾಟ್ಸ್​ಆಪ್ ಮೂಲಕ ಪಡೆದುಕೊಂಡು ಸಹಾಯ ನೀಡಲಾಗಿದೆ. ಮಾಸಾಶನಗಳನ್ನು ಸಹ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ಆಶ್ರಯ ವಸತಿ ಯೋಜನೆಯಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ಆದ್ಯತೆ ನೀಡಲು ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಶೆಟ್ಟರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net