

ಬಾಗಲಕೋಟ: ಸ್ವಾತಂತ್ರ್ಯ ದೊರಕಿ 78 ವರ್ಷಗಳಾಗಿದೆ. ಸ್ವಾತಂತ್ರ್ಯಕ್ಕಾಗಿ ವೀರಮಹನೀಯರು ತಮ್ಮ ಬಲಿದಾನವನ್ನು ಮಾಡಿದ್ದಾರೆ. ಅವರನ್ನು ಸ್ಮರೀಸುವ ಕಾರ್ಯವಾಗಬೇಕಿದೆ. ಇಂದು ನಾವು ಸ್ವತಂತ್ರ್ಯ ಹಕ್ಕು ಪಡೆದು ಎಲ್ಲ ರಂಗದಲ್ಲೂ ಪ್ರಗತಿಪಥದತ್ತ ಸಾಗುತ್ತಿದ್ದೇವೆ ಎಂದು ಪ್ರಭಾರ ಜಿಲ್ಲಾ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಮತ್ತು ಜಿಲ್ಲಾ ಕುಷ್ಠರೋಗದ ನಿಯಂತ್ರಣಾಧಿಕಾರಿ ಡಾ.ಸುವರ್ಣ ಕುಲಕರ್ಣಿ ಹೇಳಿದರು.
ಬಾಗಲಕೋಟ ಜಿಲ್ಲಾ ಸಮೀಕ್ಷಾ ಘಟಕದ ಕಚೇರಿ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಭಾರತವನ್ನು ಇಂದು ವಿಶ್ವವೇ ತಿರುಗಿ ನೋಡುವಂತೆ ಅಭಿವೃದ್ಧಿಯತ್ತ ಸಾಗುತ್ತಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೀಡಿರುವ ‘ವಿಕಸಿತ್ ಭಾರತ್ @ 2047: ಯುವಜನತೆಯ ಧ್ವನಿ’ ಅಭಿಯಾನದ ಕರೆ ಇಂದು ದೇಶಾಭಿವೃದ್ಧಿಗೆ ಪೂರಕ ಕಾರ್ಯಚಟುವಟಿಕೆಗಳು ನಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ದಯಾನಂದ ಕರೆಯನ್ನವರ ಮಾತನಾಡಿ, ಪ್ರತಿಯೊಬ್ಬರು ತಮ್ಮ ತಮ್ಮ ಕಾರ್ಯಕ್ಷೇತ್ರದಲ್ಲಿ ನಿಷ್ಠೆ ಪ್ರಮಾಣಿಕವಾಗಿ ಕಾರ್ಯನಿರ್ವಹಿಸಿದಾಗ ನಮ್ಮ ದೇಶದ ಅಭಿವೃದ್ಧಿ ತನ್ನಿಂದತಾನೇ ಆಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಶೈಕ್ಷಣಿಕ, ಆರೋಗ್ಯ, ಆರ್ಥಿಕ, ಸಾಮಾಜಿಕ,ಕ್ರೀಡೆ, ಸಾಂಸ್ಕೃತಿಕ ಮತ್ತಿತರ ರಂಗಳಲ್ಲಿ ದಕ್ಷತೆಯಿಂದ ತೊಡಗಿದಾಗ ಪ್ರಗತಿ ಸಾಧ್ಯವಾಗುತ್ತದೆಂದರು.
ಈ ಸಂದರ್ಭದಲ್ಲಿ ಡಾ.ಸೀಮಾ ಹುದ್ದಾರ, ಡಾ.ಅಜೀತ ಪಾಟೀಲ, ಎಂ.ಬಿ.ಪಾಟೀಲ್, ಎಚ್.ಪಿ.ನಾಯ್ಕರ, ಶಶಿಕುಮಾರ್ ಕುಮಟಳ್ಳಿ ಸೇರಿದಂತೆ ಜಿಲ್ಲಾ ಸಮೀಕ್ಷಾ ಘಟಕದ ಸಿಬ್ಬಂದಿ, ಜಿಲ್ಲಾ ಕುಷ್ಠರೋಗದ ನಿಯಂತ್ರಣಾಧಿಕಾರಿ ಕಚೇರಿ ಸಿಬ್ಬಂದಿ ಹಾಜರಿದ್ದರು.