

ಎನ್.ಆರ್.ಪುರ: ಅಂಗವಿಕಲರು ಎಂದು ತಾತ್ಸಾರ ಮಾಡದೆ ಸಮಾಜದ ಮುಖ್ಯ ವಾಹಿನಿಗೆ ಕರೆ ತರಬೇಕು ಎಂದು ಸೆಂಟ್ ನಾರ್ಬಟ್ ಶಾಲೆ ನಿರ್ದೇಶಕ ಫಾ.ಜಸ್ಟೀನ್ ತಯಲ್ ಹೇಳಿದರು.
ಗುರುವಾರ ಸಿಡಿಪಿಒ ಇಲಾಖೆ ಸ್ತ್ರೀಶಕ್ತಿ ಭವನದಲ್ಲಿ ಜಿಪಂನಿಂದ ಆಯೋಜಿಸಿದ್ದ ಅಂಗವಿಕಲರಿಗೆ ಕಾಯ್ದೆ, ಕಾನೂನು ಸರ್ವೇ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಕಲಚೇತನ ಮಕ್ಕಳು ದೇವರಿಗೆ ಸಮಾನರು. ಅವರು ಎಲ್ಲರಿಗಿಂತ ವಿಶೇಷ ಗುಣ ಹೊಂದಿರುತ್ತಾರೆ. ನಮ್ಮ ಶಾಲೆಯಲ್ಲಿರುವ ಅಂಗವಿಕಲ ಮಕ್ಕಳೊಂದಿಗೆ ಕಾರ್ಯ ನಿರ್ವಹಿಸುವ ಅವಕಾಶ ನನಗೆ ಸಿಕ್ಕಿರುವುದು ಸಂತಸದ ವಿಷಯ ಎಂದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಚ್.ಎಸ್.ಸಾಜು ಮಾತನಾಡಿ, ವಿಕಲಚೇತನರನ್ನು ಅಂಗವಿಕಲರು ಎಂದು ಕರೆಯಬಾರದು ಎಂಬ ಕಾನೂನು ಇದೆ. ವಿಕಲಚೇತನರಿಗೆ ಸರ್ಕಾರದಿಂದ ಅನೇಕ ಸೌಲಭ್ಯಗಳು ಉಚಿತವಾಗಿ ಸಿಗಲಿದೆ. ಅದನ್ನು ಪ್ರತಿಯೊಬ್ಬರಿಗೂ ಸಿಗುವಂತೆ ನೋಡಿಕೊಳ್ಳಬೇಕು. ಸರ್ಕಾರ ಪ್ರತಿ ಕ್ಷೇತ್ರದಲ್ಲೂ ವಿಕಲಚೇತನರಿಗೆ ಅವಕಾಶ ನೀಡಿದೆ ಎಂದರು.
ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿ ವೀರಭದ್ರಯ್ಯ ಮಾಜಿ ಗೌಡ್ರ ಮಾತನಾಡಿ, ವಿಕಲಚೇತನರನ್ನು ಕೆಟ್ಟ ದೃಷ್ಟಿಯಿಂದ ನೋಡಬಾರದು. ಎಲ್ಲರಂತೆ ಅವರೂ ಸಮಾನರಾಗಿದ್ದಾರೆ. ಪ್ರತಿ ವಿಕಲಚೇತನರಿಗೆ ಸರ್ಕಾರದ ಎಲ್ಲ ಸೌಲಭ್ಯಗಳನ್ನೂ ಸಿಗುವಂತೆ ಕಾರ್ಯ ನಿರ್ವಹಿಸುವುದು ನಮ್ಮೆಲ್ಲರ ಕರ್ತವ್ಯ. ಯುಡಿಐಡಿ ಕಾರ್ಡನ್ನು ಎಲ್ಲ ವಿಕತಚೇತನರೂ ಮಾಡಿಸುವಂತೆ ಹಾಗೂ ಮಾಹಿತಿ ಸಿಗುವಂತೆ ಅಂಗನವಾಡಿ ಕಾರ್ಯಕರ್ತೆಯರು ಸಹಾಯ ಮಾಡಬೇಕು. ಅಂಗನವಾಡಿ ಕಾರ್ಯಕರ್ತೆಯರು ಗರ್ಭಿಣಿಯರು ಹಾಗೂ ಮಕ್ಕಳ ಆರೋಗ್ಯ ನೋಡಿಕೊಳ್ಳಬೇಕು. ಮಕ್ಕಳಲ್ಲಿ ನ್ಯೂನತೆ ಕಂಡುಬಂದಾಗ ಆದಷ್ಟು ಬೇಗ ಅವರಿಗೆ ಸಲಹೆ ನೀಡಿ ಚಿಕಿತ್ಸೆಗೆ ನೆರವಾಗಬೇಕು ಎಂದು ಸೂಚಿಸಿದರು.
ಮಹಿಳಾ ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ಆರ್.ಶಶಿಕಲಾ, ವಿಕಲಚೇತನರು, ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.