

ಭದ್ರಾವತಿ: ಉಕ್ಕಿನನಗರಿಯ ವಿಐಎಸ್‌ಎಲ್, ಎಂಪಿಎಂ ಕಾರ್ಖಾನೆಗಳು ಪುನಶ್ಚೇತನಗೊಳ್ಳಬೇಕು. ನಿವೃತ್ತ ಕಾರ್ಮಿಕರ ಮಕ್ಕಳಿಗೆ ಉದ್ಯೋಗ ಸಿಗುವಂತಾಗಬೇಕು ಎನ್ನುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಸ್ಥಳೀಯ ಸಂಸದರು ಹಾಗೂ ನನ್ನ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ ಎಂದು ಶಾಸಕ ಬಿ.ಕೆ.ಸಂಗಮೇಶ್ವರ್ ಹೇಳಿದರು.
ಜನ್ನಾಪುರದಲ್ಲಿ ಗುರುವಾರ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರ ಆಯೋಜಿಸಿದ್ದ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ 162ನೇ ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡಿ, ವಿಐಎಸ್‌ಎಲ್ ಕಾರ್ಖಾನೆಗೆ ಅಗತ್ಯವಿದ್ದ 150 ಹೆಕ್ಟೇರ್ ಗಣಿ ಮಂಜೂರು ಮಾಡಿಸಿಕೊಟ್ಟಿದ್ದೇನೆ. ಸಂಸದರು ಬಂಡವಾಳ ತೊಡಗಿಸಿ ಅಭಿವೃದ್ಧಿ ಮಾಡುವ ಕೆಲಸ ಮಾಡುತ್ತಿದ್ದಾರೆ. ನಗರದಲ್ಲಿ ಇಂಜಿನಿಯರಿಂಗ್ ಕಾಲೇಜು ತೆರೆಯುವ ಆಸೆ ನನ್ನದಾಗಿದೆ. ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆಯಬೇಕಾದರೆ ಹೆಚ್ಚಿನ ಅಧಿಕಾರ ಬೇಕು. ಮುಂದಿನ ದಿನಗಳಲ್ಲಿ ಸಚಿವರಾಗುವ ಭರವಸೆ ವ್ಯಕ್ತವಾಗಿದ್ದು ಅದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ನಿವೃತ್ತ ಕಾರ್ಮಿಕರು ತಾವಿರುವ ಮನೆಯನ್ನು ಖಾಲಿ ಮಾಡುವ ಅಗತ್ಯವಿಲ್ಲ. ಲೀಸ್ ಅವಧಿ 33 ವರ್ಷಗಳವರೆಗೆ ಮುಂದುವರಿಯಲಿದೆ. ಇದರಿಂದ ಕಾರ್ಖಾನೆಗೆ ಆಗುವ ಲಾಭ-ನಷ್ಟಗಳನ್ನು ನಾನು ಅಧಿಕಾರಿಗಳಿಗೆ ಮನವಿ ಮಾಡಿ ತಿಳಿಸುತ್ತೇನೆ. ನಗರಸಭೆ ವ್ಯಾಪ್ತಿಗೆ ವಿಐಎಸ್‌ಎಲ್ ಕಾರ್ಖಾನೆ ವಸತಿಗೃಹಗಳು ಬರದಿದ್ದರೂ ನೀರು, ವಿದ್ಯುತ್ ಎಲ್ಲವನ್ನೂ 20 ಕೋಟಿ ರೂ. ವೆಚ್ಚದಲ್ಲಿ ಮಾಡಲಾಗಿದೆ. ಸರ್ ಎಂ.ವಿಶ್ವೇಶ್ವರಯ್ಯನವರು ದೇಶದಲ್ಲಷ್ಟೆ ಅಲ್ಲದೆ ವಿದೇಶಗಳಲ್ಲಿಯೂ ಮಾನ್ಯತೆ ಪಡೆದುಕೊಂಡವರು ಎಂದು ತಿಳಿಸಿದರು.
ಐಎಸ್‌ಎಲ್ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್.ಚಾಂದ್ವಾನಿ ಮಾತನಾಡಿ, ವಿಐಎಸ್‌ಎಲ್ ಕಾರ್ಖಾನೆಯ ಎಲ್ಲ ಪ್ಲಾಂಟ್‌ಗಳು ಪುನರಾರಂಭಗೊಳ್ಳಬೇಕೆಂಬ ಆಸೆ ನಮಗೂ ಇದೆ. ಈ ಕಾರ್ಖಾನೆ ಅನ್ಯ ಸ್ಥಾವರ ಸಂಸ್ಥೆಗೆ ಅವಲಂಬಿತವಾಗಿದೆ. ಆದರೂ ಎಲ್ಲ ಕಾರ್ಮಿಕರು ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ನಾವು ಉತ್ಪಾದನೆಯಲ್ಲಿ ಸಾಧನೆ ಮಾಡುತ್ತಿದ್ದೇವೆ. ಉತ್ಪಾದನೆ ಪ್ರಾರಂಭ ಮಾಡಲು ಯೋಜನೆ ರೂಪಿಸಿಕೊಳ್ಳಲಾಗಿದೆ. ಅದರ ಪ್ರಸ್ತಾವನೆ ಸಿದ್ಧಪಡಿಸಿದ್ದು ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.
ಎಲ್ಲವೂ ಸರಿಯಾಗಲಿದೆ: ಆಧುನಿಕ ಭಾರತದ ಶಿಲ್ಪಿಯಾಗಿ ಗುರುತಿಸಿಕೊಂಡ ಕನ್ನಡಿಗ ಸರ್ ಎಂ.ವಿಶ್ವೇಶ್ವರಯ್ಯ ಅವರನ್ನು ಇಂದು ಕರ್ನಾಟಕವಷ್ಟೇ ಅಲ್ಲದೆ, ಇಡೀ ದೇಶವೇ ನೆನಪು ಮಾಡಿಕೊಳ್ಳುತ್ತಿರುವುದು ನಮ್ಮೆಲ್ಲರ ಹೆಮ್ಮೆಯಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು. ಉಕ್ಕು ಕಾರ್ಖಾನೆ, ಲಿಂಗನಮಕ್ಕಿನ ಜಲಾಶಯದ ಮೂಲಕ ವಿದ್ಯುತ್ ಉತ್ಪಾದನೆ ಸೇರಿದಂತೆ ಶಿವಮೊಗ್ಗ ಜಿಲ್ಲೆ ರಾಜ್ಯ, ರಾಷ್ಟ್ರಕ್ಕೆ ಅವರ ಕೊಡುಗೆ ಸಾಕಷ್ಟಿದೆ ಎಂದರು. ವಿಐಎಸ್‌ಎಲ್ ಕಾರ್ಖಾನೆ ಪುನಶ್ಚೇತನ ಕುರಿತು ನಿರಂತರ ಶ್ರಮ ಹಾಕಲಾಗಿದೆ. ಆದರೆ ಫಲಿತಾಂಶ ನಿಮಗೆ ಮುಟ್ಟಿಸುವ ನಿಟ್ಟಿನಲ್ಲಿ ಆಗಿಲ್ಲ. ನನ್ನ ಪ್ರಯತ್ನದಲ್ಲಿ ಯಾವುದೇ ಕೊರತೆ ಇಲ್ಲ. ದೇಶದ ಆರ್ಥಿಕ ಪರಿಸ್ಥಿತಿ ಕಾರಣ ಬಂಡವಾಳ ಹೂಡಿಕೆ ಹಿಂತೆಗೆತ ನೀತಿ ವಿಐಎಸ್‌ಎಲ್‌ಗೆ ಮಾರಕವಾಗಿದ್ದು ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ ಎಂದರು.