

ವಿಶೇಷ ವರದಿ ತುಮಕೂರು
ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಮಾತು ಕೇಳಿಬಂದಿದ್ದು, ಇದಕ್ಕೆ ಪುಷ್ಠಿ ನೀಡುವಂತೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ಡಿ.20ರಂಂದು ಹೊರಡಿಸಿದ್ದ 1:3 ಅನುಪಾತದ ಪಟ್ಟಿಯನ್ನು ತರಾತುರಿಯಲ್ಲಿ ವಾಪಸ್ ಪಡೆದಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಅರ್ಜಿ ಆಹ್ವಾನಿಸಿದ್ದ 73 ಹುದ್ದೆಗಳಿಗೆ ಬರೋಬ್ಬರಿ 4320 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ, ಪರೀೆ ಬರೆದಿದ್ದರು. ಪತ್ರಿಕೆ 1 ಹಾಗೂ ಪತ್ರಿಕೆ 2ರ ಅಂಕಪಟ್ಟಿ ಪ್ರಕಟಿಸಿ ನವೆಂಬರ್ 28ರೊಳಗೆ ತಾತ್ಕಾಲಿಕ ಅಂಕಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಡಿ.9ರಂದು ಆಕ್ಷೇಪಣೆ ಪರಿಶೀಲಿಸಿ ಜಿಲ್ಲಾವಾರು ಅಂತಿಮ ಅಂಕಪಟ್ಟಿಯನ್ನು ಪ್ರಾಧಿಕಾರ ವೆಬ್ಸೈಟ್ನಲ್ಲಿ ಪ್ರಕಟಿಸಿತ್ತು. ಈ ಪೈಕಿ 1:3 ಆಧಾರದಲ್ಲಿ 219 ಅಭ್ಯರ್ಥಿಗಳಿಗೆ ದಾಖಲೆ ಪರಿಶೀಲನೆಗೆ ಹಾಜರಾಗುವಂತೆ ಡಿ.20ರಂದು ಹೊರಡಿಸಿದ್ದ ಪಟ್ಟಿಯನ್ನು ಕೆಲವೇ ಗಂಟೆಗಳನ್ನು ವಾಪಸ್ ಪಡೆಯಲಾಗಿದೆ. ಆದರೆ, ಈ ಬಗ್ಗೆ ಡಿಸಿ ಕಚೇರಿಯಿಂದ ಯಾವುದೇ ಸ್ಪಷ್ಟನೆ ಬರದಿರುವುದು ಅಭ್ಯರ್ಥಿಗಳಲ್ಲಿ ಅನುಮಾನ ಹೆಚ್ಚಾಗಲು ಕಾರಣವಾಗಿದೆ.
ಜಿಲ್ಲೆಗೆ ಕೆಟ್ಟಹೆಸರು: ಪಾರದರ್ಶಕವಾಗಿ ನಡೆಯಬೇಕಿದ್ದ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆಯಲ್ಲಿಯೂ ನಡೆದಿರುವ ಎಡವಟ್ಟು ಜಿಲ್ಲೆಗೆ ಕೆಟ್ಟಹೆಸರು ಬರುವಂತಾಗಿದ್ದು, ಸಾರ್ವಜನಿಕವಾಗಿಯೂ ಆಕ್ರೋಶ ವ್ಯಕ್ತವಾಗಿದೆ. ಅರ್ಹ ಅಭ್ಯರ್ಥಿಗಳನ್ನು ಬಿಟ್ಟು ಅನರ್ಹರಿಗೆ ದಾಖಲೆ ಪರಿಶೀಲನೆಗೆ ಹಾಜರಾಗುವಂತೆ ಪಟ್ಟಿ ಪ್ರಕಟಿಸಿದ್ದಾರೆ ಎಂದು ಆರೋಪಿರುವ ಕೆಲವು ಉದ್ಯೋಗಾಕಾಂಗಳು ನೇಮಕಾತಿ ಪ್ರಾಧಿಕಾರದ ವಿರುದ್ಧ ಕೋರ್ಟ್ ಮೆಟ್ಟಿಲೇರುವ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ.
ದಾವಣಗೆರೆ ಜಿಲ್ಲೆಯನ್ನು ಹೊರತುಪಡಿಸಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ದಿನಾಂಗ ನಿಗದಿಪಡಿಸಿ ಡಿ.17ರಂದು ಕಂದಾಯ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದರು. ಜಿಲ್ಲಾವಾರು ಅರ್ಹತೆ ಪಡೆದ ಅಭ್ಯರ್ಥಿಗಳ ಎಲ್ಲ ವಿವರ ನೀಡಲಾಗಿತ್ತು. ಡಿ.20ರಿಂದ 24ರ ವರೆಗೆ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ 1:3 ಅನುಪಾತದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ದಾಖಲೆ ಪರಿಶೀಲನೆಗೆ ಪ್ರಕಟಿಸುವುದು, ಜ.2ರಿಂದ 10ರ ವರೆಗೂ ದಾಖಲಾತಿ ಪರಿಶೀಲನೆ ಮತ್ತು ಅಂಗವಿಕಲರ ವೈದ್ಯಕಿಯ ಪರೀೆ, ಜ.15ರಂದು ತಾತ್ಕಾಲಿಕ 1:1 ಆಯ್ಕೆ ಪಟ್ಟಿ ಪ್ರಕಟಿಸುವುದು.
ಜ.16ರಂದು ಆಯ್ಕೆ ಪಟ್ಟಿ, ಹೆಚ್ಚುವರಿ ಆಯ್ಕೆಪಟ್ಟಿಗೆ ಆಕ್ಷೇಪಣೆ ಆಹ್ವಾನ ಹಾಗೂ 2025 ಜ.27ರಂದು ಅಂತಿಮ ಆಯ್ಕೆಪಟ್ಟಿ ಪ್ರಕಟಿಸಲು ಸರ್ಕಾರ ನಿದೇರ್ಶಿಸಿತ್ತು. ಆದರೆ, ತುಮಕೂರು ಜಿಲ್ಲಾಡಳಿತ 1:3 ಅನುಪಾತದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿ ತರಾತುರಿಯಲ್ಲಿ ವಾಪಸ್ ಪಡೆದಿರುವುದು ಹಾಗೂ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡದ ಮೌನವಾಗಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ತುಮಕೂರು ಜಿಲ್ಲೆಯ ಪಟ್ಟಿ ವಾಟ್ಸ್ಆ್ಯಪ್ಗಳಲ್ಲಿ ಹರಿದಾಡಿದ ನಂತರ ಅದನ್ನು ಡಿಲೀಟ್ ಮಾಡಿಸಲಾಗಿದೆ.
ರಾಜ್ಯದಲ್ಲಿ 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳನ್ನು ಸ್ಫರ್ಧಾತ್ಮಕ ಪರೀೆಯ ಮೂಲಕ ಆಯ್ಕೆ ಮಾಡಲು ಹೊರಡಿಸಿದ್ದ ಅಧಿಸೂಚನೆಯಂತೆ ಬರೋಬ್ಬರಿ 5.70ಲಕ್ಷ ಅರ್ಜಿ ಸಲ್ಲಿಕೆಯಾಗಿದ್ದವು. ಈ ಪೈಕಿ ಕನ್ನಡ ಕಡ್ಡಾಯ ಪರೀೆಯಲ್ಲಿ 4.16 ಲಕ್ಷ ಅಭ್ಯರ್ಥಿಗಳು ಅರ್ಹರಾಗಿದ್ದರು. ನಂತರ ವಯೋಮಿತಿ ಸಡಿಲಿಕೆಯಿಂದ ಮತ್ತಷ್ಟು ಜನರಿಗೂ ಪರೀೆ ಬರೆಯಲು ಅವಕಾಶವಾಗಿತ್ತು.