

ಹನೂರು: ಶಿಕ್ಷಕ ದಿನಾಚರಣೆ ಅಂಗವಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಕಟಿಸಿರುವ 2023-24ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಹನೂರು ಶೈಕ್ಷಣಿಕ ವಲಯದ ಬಸಪ್ಪನದೊಡ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ವಿ.ವೀರಪ್ಪ ಭಾಜನರಾಗಿದ್ದಾರೆ.
ತಾಲೂಕಿನ ಶಾಗ್ಯ ಗ್ರಾಮದವರಾದ ಇವರು ಮಲೆಮಹದೇಶ್ವರ ಬೆಟ್ಟದ ತಂಬಡಿಗೇರಿ ಕಾಲನಿಯಲ್ಲಿ ವಾಸವಾಗಿದ್ದಾರೆ. 1992ರಲ್ಲಿ ಸೇವೆಗೆ ಸೇರಿದ ಇವರು ಕರ್ನಾಟಕ ಗಡಿಭಾಗದ ಗ್ರಾಮ ಗೋಪಿನಾಥಂ ಸರ್ಕಾರಿ ಶಾಲೆಯಲ್ಲಿ 6 ವರ್ಷ, ಆಣೆಹೊಲ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 6 ವರ್ಷ, ಗೊರಸಾಣೆ ಶಾಲೆಯಲ್ಲಿ 14 ವರ್ಷ ಹಾಗೂ ಪ್ರಭಾರ ಮುಖ್ಯ ಶಿಕ್ಷಕರಾಗಿ ತುಳಸಿಕೆರೆ ಶಾಲೆಯಲ್ಲಿ 2 ವರ್ಷ ಸೇವೆ ಸಲ್ಲಿಸಿದ್ದು, ಮುಖ್ಯ ಶಿಕ್ಷಕರಾಗಿ ಬಡ್ತಿ ಹೊಂದಿದ ಬಳಿಕ ಮತ್ತೆ ಗೋಪಿನಾಥಂ ಶಾಲೆಯಲ್ಲಿ 4 ವರ್ಷ ಕರ್ತವ್ಯ ನಿರ್ವಹಿಸಿ (ಪ್ರಶಸ್ತಿಗೆ ಸೂಚಿಸಿರುವ ಶಾಲೆ), ಪ್ರಸ್ತುತ ಬಸಪ್ಪನ ದೊಡ್ಡಿ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ತಾಲೂಕಿನ ಮ.ಬೆಟ್ಟದ ಭಾಗದ ಗುಡ್ಡಗಾಡು ಪ್ರದೇಶದ ಶಾಲೆಗಳಲ್ಲಿ ಅನೇಕ ಸವಾಲುಗಳನ್ನು ಎದುರಿಸಿ 32 ವರ್ಷ ಸೇವೆ ಸಲ್ಲಿಸಿರುವ ಇವರನ್ನು ಶಿಕ್ಷಣ ಇಲಾಖೆ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಈ ಬಗ್ಗೆ ಶೈಕ್ಷಣಿಕ ವಲಯದ ಶಿಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಿರೀಶ್, ಉಪಾಧ್ಯಕ್ಷರಾದ ಸ್ಯಾಮುವೆಲ್ ಕಮಲನಾಥನ್, ಮೋಚರಾಕಿಣಿ, ಕಾರ್ಯದರ್ಶಿ ಮುನಿನಾಯಕ, ಖಜಾಂಚಿ ಶಿವರಾಜಮ್ಮ, ಸಹ ಕಾರ್ಯದರ್ಶಿಗಳಾದ ನಾಗಸುಂದರ, ಕೃಷ್ಣೇಗೌಡ ಹಾಗೂ ಸದಸ್ಯರು ಅಭಿನಂದಿಸಿದ್ದಾರೆ.