ವಿ.ವಿ.ಸಾಗರ ನಾಲೆಗಳಿಗೆ ನೀರು ಹರಿಸಿ

V.V.Sagara
Published on

ಚಿತ್ರದುರ್ಗ: ಹಿರಿಯೂರಿನ ವಾಣಿವಿಲಾಸ ಸಾಗರ ಅಚ್ಚುಕಟ್ಟು ಪ್ರದೇಶಕ್ಕೆ ಅ. 17ರಿಂದ ನ. 16ರವರೆಗೂ ನಾಲೆಗಳಲ್ಲಿ ನೀರು ಹರಿಸಲು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನೀರಾವರಿ, ಕೃಷಿ, ತೋಟಗಾರಿಕೆ, ರೈತರೊಂದಿಗೆ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದರು.

ಸಮರ್ಪಕ ನೀರು ನಿರ್ವಹಣೆ ಜತೆಗೆ ಯಾವುದೇ ಕಾರಣಕ್ಕೂ ಪೋಲಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಿ ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಜಿ.ಆರ್.ಜೆ. ದಿವ್ಯಾಪ್ರಭು ಮಾತನಾಡಿ, ಅಚ್ಚುಕಟ್ಟು ವ್ಯಾಪ್ತಿಯ ಎಲ್ಲಾ ಹಳ್ಳಿಗಳಿಗೆ ನೀರು ಹರಿಸುವ ಪೂರ್ವದಲ್ಲಿ ಮುಂಜಾಗ್ರತಾ ಕ್ರಮವಾಗಿ ಜನ, ಜಾನುವಾರುಗಳಿಗೆ ತೊಂದರೆ ಆಗಬಾರದು. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರವಹಿಸಬೇಕು. ಈ ಕುರಿತು ವ್ಯಾಪಕ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.

ಈ ಬಾರಿ ವಾಡಿಕೆಗಿಂತಲೂ ಅತೀ ಕಡಿಮೆ ಮಳೆಯಾಗಿ, ಜಿಲ್ಲೆಯಲ್ಲಿ ಬರಗಾಲ ಉಂಟಾಗಿದೆ. ಅಚ್ಚುಕಟ್ಟು ವ್ಯಾಪ್ತಿಯ ಕೃಷಿ, ತೋಟಗಾರಿಕೆ ಹಾಗೂ ಇತರ ಬೆಳೆಗಳಿಗೆ ನೀರು ಅಗತ್ಯವಾಗಿದ್ದು, ವಿ.ವಿ.ಸಾಗರದಲ್ಲಿ ನೀರಿರುವ ಕಾರಣ ಒಂದು ತಿಂಗಳು ನಾಲೆಗಳಿಂದ ಪೂರೈಸಬೇಕು ಎಂದು ಸಲಹಾ ಸಮಿತಿ ಸದಸ್ಯರು ಮನವಿ ಮಾಡಿಕೊಂಡರು.

ನೀರು ನಾಲೆಗಳಲ್ಲಿ ಹರಿಸುವುದರಿಂದ ನಾಲೆಯ ಅಕ್ಕಪಕ್ಕದ ಎಲ್ಲಾ ಗ್ರಾಮಗಳ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ಅಲ್ಲದೆ, ತೋಟಗಾರಿಕೆ ಬೆಳೆಗಳು ಹಾಗೂ ಅಲ್ಪ ಸ್ವಲ್ಪ ಒಣಗಿರುವ ಬೆಳೆಗಳನ್ನು ಉಳಿಸಿಕೊಳ್ಳಬಹುದು ಎಂದು ಸಚಿವರಿಗೆ ಮನವರಿಕೆ ಮಾಡಿದರು. ಹೀಗಾಗಿ ಅಧಿಕಾರಿಗಳ ಸಲಹೆ ಪಡೆದು ನೀರು ಹರಿಸಲು ತೀರ್ಮಾನಿಸಲಾಯಿತು.

ವಿ.ವಿ.ಸಾಗರ ಉಪವಿಭಾಗ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿ.ಎಂ.ವಿಜಯಕುಮಾರ್, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಲೋಕೇಶ್, ಸಹಾಯಕ ಕೃಷಿ ಅಧಿಕಾರಿ ಕಿರಣ್, ಸಮಿತಿ ಸದಸ್ಯರಾದ ಕೆ.ಟಿ.ತಿಪ್ಪೇಸ್ವಾಮಿ, ಸಿದ್ದರಾಮಣ್ಣ, ಆರ್.ಗೌಡ, ರಾಮಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net