

ಕೋಲಾರ: ಸ್ಥಳೀಯ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕಾಂಗ್ರೆಸ್-ಬಿಜೆಪಿ ಬೆಂಬಲಿತ 11ನೇ ವಾರ್ಡ್‌ನ ಪಕ್ಷೇತರ ಸದಸ್ಯ ವಿ.ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದು, ರಾಜಕೀಯವಾಗಿ ಹಾವು ಮುಂಗುಸಿಯಂತೆ ಕಿತ್ತಾಡುವ ಕಾಂಗ್ರೆಸ್ ಮತ್ತು ಬಿಜೆಪಿ ಒಗ್ಗೂಡಿರುವುದು ಅಚ್ಚರಿ ಮೂಡಿಸಿದೆ.
ಕಾಂಗ್ರೆಸ್ ಸದಸ್ಯರು ತಮ್ಮದೇ ಪಕ್ಷದ ವಾರ್ಡ್ ನಂ 29ರ ಸದಸ್ಯ ಎನ್. ಅಂಬರೀಷ್ ಅವರನ್ನು ಸ್ಥಾಯಿ ಸಮಿತಿಗೆ ಆಯ್ಕೆಯಾಗದಂತೆ ಸೋಲಿಸುವಲ್ಲಿ ಪ್ರಮುಖ ಪಾತ್ರವಹಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಅಭ್ಯರ್ಥಿಗಳು ಆಯ್ಕೆಯಾಗಿರುವುದಕ್ಕೆ ಬೆಂಬಲ ನೀಡಿದ್ದ ಬಹುತೇಕ ಪಕ್ಷೇತರ ಸದಸ್ಯರು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಪಟ್ಟು ಹಿಡಿದಿದ್ದರು. ಆದರೆ ಶಾಸಕ ಶ್ರೀನಿವಾಸಗೌಡ ಶ್ರೀನಿವಾಸಪುರದ ಕಾಂಗ್ರೆಸ್ ಶಾಸಕ ಕೆ.ಆರ್.ರಮೇಶ್‌ಕುಮಾರ್ ಕಟ್ಟಾ ಬೆಂಬಲಿಗ ಅಂಬರೀಷ್‌ಗೆ ಪಟ್ಟ ಕಟ್ಟಲು ನಿರ್ಧರಿಸಿ ಜೆಡಿಎಸ್ ಸದಸ್ಯರಿಗೆ ಸೂಚಿಸಿದ್ದರು.
ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಪಕ್ಷೇತರರು ನಗರಸಭೆ ಮಾಜಿ ಅಧ್ಯಕ್ಷ, ಹಾಲಿ ಕಾಂಗ್ರೆಸ್ ಸದಸ್ಯ ಬಿ.ಎಂ. ಮುಬಾರಕ್ ಅವರನ್ನು ಸಂಪರ್ಕಿಸಿ ಪಕ್ಷೇತರ ಸದಸ್ಯ ಮಂಜುನಾಥ್ ಪರ ಲಾಬಿ ಮಾಡುವಂತೆ ಕೋರಿದ್ದರು.
ಮಂಗಳವಾರ ಸಂಜೆ ಸ್ಥಾಯಿ ಸಮಿತಿಗೆ 7 ಸದಸ್ಯರನ್ನು ಆಯ್ಕೆ ಮಾಡುವ ಸಂಬಂಧ ಚರ್ಚೆ ನಡೆದಾಗ ಅಂಬರೀಷ್ ಪಟ್ಟು ಬಿಡದೆ ತಮ್ಮ 7 ಸದಸ್ಯರ ಟೀಮ್‌ನೊಂದಿಗೆ ಚುನಾವಣೆ ಎದುರಿಸಿದರು. ಮುಬಾರಕ್ ನೇತೃತ್ವದಿಂದಲೂ 7 ಜನ ಕಣಕ್ಕಿಳಿದಿದ್ದರು. ಜೆಡಿಎಸ್‌ನ ಬಹುತೇಕ ಸದಸ್ಯರು ಚುನಾವಣೆ ಬೇಡವೆಂದು ಕೋರಿದರಾದರೂ ಕಾಂಗ್ರೆಸ್ ಮತ್ತು ಪಕ್ಷೇತರರು ಚುನಾವಣೆಗೆ ಪಟ್ಟು ಹಿಡಿದಾಗ ಅಧ್ಯಕ್ಷೆ ಆರ್.ಶ್ವೇತಾ ಮತ್ತು ಪೌರಾಯುಕ್ತ ಶ್ರೀಕಾಂತ್ ಒತ್ತಡಕ್ಕೆ ಸಿಲುಕಬೇಕಾಯಿತು.
ಜೆಡಿಎಸ್‌ನ ಇದಾಯಿತ್ ಚುನಾವಣೆ ಬೇಡವೆಂದು ಸಭೆಯಿಂದ ಹೊರನಡೆಯಲು ಯತ್ನಿಸಿದಾಗ ಸದಸ್ಯರು ಬಲವಂತವಾಗಿ ಎಳೆದಾಡಿದಾಗ ಗದ್ದಲ ಉಂಟಾಯಿತು. ಅಧ್ಯಕ್ಷರು, ಪೌರಾಯುಕ್ತರು ಮಧ್ಯಪ್ರವೇಶಿಸಿ ಸದಸ್ಯರನ್ನು ಸಮಾಧಾನಪಡಿಸಿದರು. ಚುನಾವಣೆ ನಡೆಸಲೇಬೇಕೆಂದು ಕಾಂಗ್ರೆಸ್, ಬಿಜೆಪಿ ಸದಸ್ಯರು ಪಕ್ಷೇತರರು ಒಳಗೂಡಿ ಪ್ರತಿಭಟಿಸಿದ್ದರಿಂದ ಮಣಿದ ಅಧ್ಯಕ್ಷೆ ಶ್ವೇತಾ ಚುನಾವಣೆ ನಡೆಸುವಂತೆ ಪೌರಾಯುಕ್ತರಿಗೆ ಸೂಚಿಸಿದರು.
ತಡರಾತ್ರಿ 11 ಗಂಟೆಗೆ ನಡೆದ ಚುನಾವಣೆಯಲ್ಲಿ 17 ಸದಸ್ಯರ ಪೈಕಿ ಅಪೂರ್ವ, ಅಸ್ಲಾಂ ಪಾಷಾ, ಗುಣಶೇಖರ್, ಲಕ್ಷ್ಮೀದೇವಮ್ಮ, ವಿ.ಮಂಜುನಾಥ್, ನಾರಾಯಣಮ್ಮ ಮತ್ತು ಗಂಗಮ್ಮ ಆಯ್ಕೆಯಾಗುವ ಮೂಲಕ ಕಾಂಗ್ರೆಸ್‌ನ ಅಂಬರೀಷ್ ಮತ್ತಿತರ 6 ಸದಸ್ಯರನ್ನು ಸೋಲಿಸಿ ಜೆಡಿಎಸ್‌ನ ಒಂದು ಬಣಕ್ಕೆ ಸೋಲು ಉಣಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾತ್ರಿಯೇ ಚುನಾವಣೆ ನಡೆಯಬೇಕಿತ್ತಾದರೂ ಆಯ್ಕೆಯಾಗಿದ್ದ 7 ಸದಸ್ಯರು ಬುಧವಾರ ಚುನಾವಣೆ ನಡೆಸುವಂತೆ ಕೋರಿದ್ದರಿಂದ ಮಧ್ಯಾಹ್ನ ಚುನಾವಣೆ ನಡೆಯಿತು. ಮಂಜುನಾಥ್ ಅವರನ್ನು ಒಮ್ಮತದಿಂದ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಮಾಡುವ ಮೂಲಕ ನಗರಸಭೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಮೇಲಾಟಕ್ಕೆ ಸಾಕ್ಷಿಯಾಗಿದ್ದಾರೆ. ಅಧ್ಯಕ್ಷರಿಗೆ ಒಂದು ವರ್ಷದ ಅಧಿಕಾರಾವಧಿಗೆ ಒಳ ಒಪ್ಪಂದವಾಗಿದೆ.