

ಹುಬ್ಬಳ್ಳಿ: ವಿ ಬಾಸ್ಕೆಟ್ ವತಿಯಿಂದ ರಿಯಾಯಿತಿ ದರದಲ್ಲಿ ಹಣ್ಣು, ತರಕಾರಿ ಮಾರಾಟ ಮಾಡುವ ವಾಹನಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರು ನಗರದ ಮಧುರಾ ಕಾಲನಿಯ ತಮ್ಮ ನಿವಾಸದ ಬಳಿ ಮಂಗಳವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಶೆಟ್ಟರ್, ವಿ ಬಾಸ್ಕೆಟ್ ಸಂಸ್ಥೆಯಿಂದ ನೇರವಾಗಿ ರೈತರಿಂದ ಹಣ್ಣು ಹಾಗೂ ತರಕಾರಿಗಳನ್ನು ಖರೀದಿಸಿದ ನಂತರ ಅವುಗಳನ್ನು ಸ್ವಚ್ಛಗೊಳಿಸಿ ಬೇಡಿಕೆಗೆ ಅನುಸಾರವಾಗಿ ಗ್ರಾಹಕರಿಗೆ
ತಲುಪಿಸಲಾಗುವುದು ಎಂದರು. ಸಂಸ್ಥೆಯಿಂದ ರೈತರು ಹಾಗೂ ಗ್ರಾಹಕರ ಶೋಷಣೆಯಾಗದಂತೆ ಹಣ್ಣು ಹಾಗೂ ತರಕಾರಿ ಮಾರಾಟ ಮಾಡಬೇಕು ಎಂದು ಸೂಚಿಸಲಾಗಿದೆ. ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ರೈತರು ನೇರವಾಗಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅನುಕೂಲವಾಗುವಂತೆ ರೈತ ಸಂತೆಗಳನ್ನು ಆಯೋಜಿಸಲಾಗುತ್ತಿದೆ. ಬೇರೆ ರಾಜ್ಯಗಳಲ್ಲಿ ರೈತರ ಸಂತೆ ಯಶಸ್ವಿಯಾಗಿದೆ. ಅಲ್ಲಿನ ಮಾದರಿಗಳನ್ನು ಅಭ್ಯಸಿಸಿ ರಾಜ್ಯದಲ್ಲಿ ಅಳವಡಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ವಿ ಬಾಸ್ಕೆಟ್ನ ಆನಂದ ಜಾಧವ ಮಾತನಾಡಿ, ಮುಂದಿನ ಸೋಮವಾರದಿಂದ ರೈತರಿಂದ ತರಕಾರಿ, ಹಣ್ಣುಗಳನ್ನು ಖರೀದಿಸಿ ಗ್ರಾಹಕರಿಗೆ ಮಾರಾಟ ಮಾಡಲು ಆರಂಭಿಸಲಾಗುವುದು. ಪ್ರಸ್ತುತ 7 ವಾಹನಗಳಿಗೆ ಚಾಲನೆ ನೀಡಲಾಗಿದೆ. ಇನ್ನೂ 8 ವಾಹನಗಳು ಸೇರ್ಪಡೆಯಾಗಲಿವೆ ಎಂದು ತಿಳಿಸಿದರು.
ಮಧ್ಯವರ್ತಿಗಳ ಹಾವಳಿ ಇಲ್ಲದೆ ರೈತರಿಂದ ನೇರವಾಗಿ ತರಕಾರಿ, ಹಣ್ಣುಗಳನ್ನು ಖರೀದಿಸಲಾಗುವುದು. ಇವುಗಳನ್ನು ಸಂಸ್ಕರಿಸಿ ಉತ್ತಮ ಗುಣಮಟ್ಟದೊಂದಿಗೆ ಗ್ರಾಹಕರಿಗೆ ಮಾರುಕಟ್ಟೆಗಿಂತ ಶೇ. 30 ರಿಂದ 40 ರಷ್ಟು ಕಡಿಮೆ ದರದಲ್ಲಿ ಮಾರಾಟ ಮಾಡಲಾಗುವುದು ಎಂದು ಹೇಳಿದರು.
ಕೋವಿಡ್19 ಹಿನ್ನೆಲೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಕಂಪನಿಯ ಸಿಬ್ಬಂದಿ ಮಾಸ್ಕ್, ಗ್ಲೌಸ್ ಹಾಗೂ ಫೇಸ್ ಶೀಲ್ಡ್ಗಳನ್ನು ಧರಿಸಿರುತ್ತಾರೆ. ಖರೀದಿಸಲು ಬರುವ ಪ್ರತಿ ಗ್ರಾಹಕರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುವುದು. ಇದರೊಂದಿಗೆ ಸಾರ್ವಜನಿಕರಿಗೆ ಕೋವಿಡ್-19 ಕುರಿತು ಜಾಗೃತಿ ಮೂಡಿಸಲಾಗುವುದು. ಗ್ರಾಹಕರ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ದಿನಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಿಸಲಾಗುವುದು ಎಂದರು.