

ಬಳ್ಳಾರಿ : ಜಿಲ್ಲೆಗೆ ಹಸ್ತಾಂತರಿಸಲಾದ ಸುಸಜ್ಜಿತ ವಾಹನವು ಗ್ರಾಮೀಣ ಪ್ರದೇಶ ಒಳಗೊಂಡಂತೆ ನಗರದ ಕೊಳಚೆ ಪ್ರದೇಶಗಳ ಜನತೆಗೆ ಸದುಪಯೋಗವಾಗಲಿ ಎಂದು ಮೇಯರ್ ಮುಲ್ಲಂಗಿ ನಂದೀಶ್ ಹೇಳಿದರು.
ನಗರದ ಡಿಎಚ್‌ಒ ಕಚೇರಿ ಆವರಣದಲ್ಲಿ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಮೂಲಕ ಒದಗಿಸಲಾದ ಸುಸಜ್ಜಿತ ಸಂಚಾರಿ ಪ್ರಯೋಗಾಲಯ, ಆಪ್ತಸಮಾಲೋಚನೆ ಹಾಗೂ ಜನಜಾಗೃತಿ ನೀಡಲು ಎಲ್ಇಡಿ ಟಿವಿ ಹೊಂದಿದ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು. ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ರಾಜ್ಯ ಸರ್ಕಾರವು ಹೆಚ್ಚಿನ ಮುತುವರ್ಜಿ ವಹಿಸುತ್ತಿದೆ ಎಲ್ಲರೂ ಉಪಯೋಗ ಮಾಡಿಕೊಳ್ಳಬೇಕು ಎಂದರು.
ಡಿಎಚ್‌ಒ ಡಾ.ವೈ. ರಮೇಶಬಾಬು ಮಾತನಾಡಿ, ಪ್ರಸ್ತುತ ಜಿಲ್ಲೆಗೆ ಒದಗಿಸಲಾದ ಸಂಚಾರಿ ವಾಹನದಲ್ಲಿ ಸುಸಜ್ಜಿತ ಪ್ರಯೋಗಾಲಯ ಮತ್ತು ಆಪ್ತ ಸಮಾಲೋಚನೆಯ ಪ್ರತ್ಯೇಕ ವಿಭಾಗವಿದೆ. ಪ್ರಯೋಗಾಲಯ ತಂತ್ರಜ್ಞರಿಗೆ ಅಗತ್ಯ ವೈದ್ಯಕೀಯ ಪರಿಕರಗಳನ್ನು ವ್ಯವಸ್ಥಿತವಾಗಿ ಕಾಯ್ದಿಟ್ಟುಕೊಳ್ಳಲು ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ ಜಿಲ್ಲೆಯಲ್ಲಿ ಎಚ್‌ಐವಿ ನಿಯಂತ್ರಣ ಚಟುವಟಿಕೆಗಳಿಗೆ ವಾಹನವನ್ನು ಬಳಸುವ ಕುರಿತು ಮಾಹಿತಿ ನೀಡಿದರು.