

ಶಿವಕುಮಾರ ಆಯನೂರು
ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳ ರಸ್ತೆಗಳಲ್ಲಿ ಉಂಟಾಗಿರುವ ಗುಂಡಿಗಳಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ವಾಹನ ಸವಾರರು ಅಪಘಾತದಲ್ಲಿ ಕೈಕಾಲು ಮೂಳೆ ಮುರಿದುಕೊಂಡಿದ್ದಾರೆ. ಹೀಗಾಗಿ ಭಯದಲ್ಲೇ ವಾಹನ ಚಲಾಯಿಸುವ ಸ್ಥಿತಿ ಇದೆ.
ರಾಷ್ಟ್ರೀಯ ಹೆದ್ದಾರಿ ಸೇರಿ ಆಯನೂರಿನ ವಿನಾಯಕ ವೃತ್ತ, ಹೊಸನಗರ ರಸ್ತೆ, ಚಾಮುಂಡಿಪುರ, ಸಾಗರ ರಸ್ತೆ, ಹಾರನಹಳ್ಳಿ ರಸ್ತೆಗಳಲ್ಲಿ ದೊಡ್ಡ ದೊಡ್ಡ ಗುಂಡಿಗಳಾಗಿವೆ. ಈ ಭಾಗಗಳಲ್ಲಿಯೇ ಶಾಲಾ ಕಾಲೇಜುಗಳು, ಸಮುದಾಯ ಆರೋಗ್ಯ ಕೇಂದ್ರ, ನಾಡಕಚೇರಿ, ವಲಯ ಅರಣ್ಯ ಇಲಾಖೆ ಹಾಗೂ ರೈತ ಸಂಪರ್ಕ ಕೇಂದ್ರಗಳು ಇವೆ. ಹೀಗಾಗಿ ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ವೃದ್ಧರಿಗೆ ತೊಂದರೆಯಾಗಿದೆ.
ರಸ್ತೆ ಹದಗೆಟ್ಟಿರುವ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅಕಾರಿಗಳ ಸಭೆ ನಡೆಸಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಕಾಲಮಿತಿಯೊಳಗೆ ರಸ್ತೆಗಳ ಗುಂಡಿಗಳನ್ನು ಮುಚ್ಚುವಂತೆ ಸೂಚಿಸಿದ್ದರೂ ಸಮಸ್ಯೆ ಬಗೆಹರಿದಿಲ್ಲ. ತಕ್ಷಣವೇ ಪಿಡಬ್ಲುಡಿ, ರಾಷ್ಟ್ರೀಯ ಹೆದ್ದಾರಿ, ಜಿಲ್ಲಾ ಪಂಚಾಯಿತಿ ಹಾಗೂ ಜನಪ್ರತಿನಿಗಳು ಕ್ರಮ ಕೈಗೊಂಡು ಸಮಸ್ಯೆ ಸರಿಪಡಿಸಬೇಕೆಂಬ ಒತ್ತಾಯ ಸಾರ್ವಜನಿಕರಿಂದ ಕೇಳಿಬರುತ್ತಿದೆ.
ಆಯನೂರು ಹಲವಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಕೇಂದ್ರ ಸ್ಥಾನವಾಗಿದೆ. ಪ್ರತಿದಿನ ವಾಹನಗಳ ಸಂಚಾರವೂ ಹೆಚ್ಚಾಗಿರುತ್ತದೆ. ಇಲ್ಲಿ ವಾಹನ ಸವಾರರು ವೇಗವಾಗಿ ವಾಹನಗಳನ್ನು ಚಲಾಯಿಸುತ್ತಾರೆ. ಇದಕ್ಕೆ ಪೊಲೀಸ್ ಇಲಾಖೆ ನಿಯಂತ್ರಣ ಹಾಕಬೇಕಾದ ಅನಿವಾರ್ಯತೆ ಇದೆ.
ಹಾರನಹಳ್ಳಿಯಿಂದ ಸಾಗುವ ಕೆಸವಿನಕಟ್ಟೆ ಹಾಗೂ ವಿಠಗೊಂಡನಕೊಪ್ಪ ಸಂಪರ್ಕ ರಸ್ತೆಯಂತೂ ಸಂಪೂರ್ಣ ಹದೆಗೆಟ್ಟಿದೆ. ಈ ರಸ್ತೆಯಲ್ಲಿ ವಾಹನಗಳನ್ನು ಚಲಾಯಿಸುವುದು ಸವಾಲಿನ ಕೆಲಸವಾಗಿದೆ. ಈ ಗ್ರಾಮಗಳಿಂದ ಪ್ರತಿದಿನ ಶಾಲಾ ಮಕ್ಕಳು, ವ್ಯಾಪರಸ್ಥರು ಶಿವಮೊಗ್ಗ ನಗರಕ್ಕೆ ಹೋಗಿ ಬರುವುದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ.
ಹಾರನಹಳ್ಳಿ ಮಾರ್ಗದಿಂದ ಕೆಸವಿನಕಟ್ಟೆ, ವಿಠಗೊಂಡನಕೊಪ್ಪ ಸಾಗುವ ಸಂಪರ್ಕ ರಸ್ತೆ ಗುಂಡಿಗಳಿಂದಲೇ ತುಂಬಿದೆ. ರಾತ್ರಿ ವೇಳೆ ಈ ರಸ್ತೆಗಳಲ್ಲಿ ಸಂಚರಿಸುವುದು ದುಸ್ತರವಾಗಿದೆ. ಗುಂಡಿಗಳಿರುವ ಕಾರಣ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಕೂಡಲೇ ಸಂಬಂಸಿದ ಅಕಾರಿಗಳು ರಸ್ತೆಗಳನ್ನು ಸರಿಪಡಿಸಬೇಕು.
ಕೆ.ಶಿವಕುಮಾರ್, ಹಾರನಹಳ್ಳಿ ಗ್ರಾಮಸ್ಥ
ಹಲವಾರು ಕಡೆ ರಸ್ತೆಯಲ್ಲಿ ಗುಂಡಿಗಳಾಗಿ ಹಲವು ತಿಂಗಳುಗಳೇ ಕಳೆದಿವೆ. ಲೋಡ್ ಆದ ವಾಹನಗಳು ಗುಂಡಿಗೆ ಇಳಿದು ವಾಹನಗಳು ಹಾಳಾಗುತ್ತಿದೆ. ಗುಂಡಿಗಳಿಂದ ದುಡಿದ ಲಾಭವೆಲ್ಲ ವಾಹನ ರಿಪೇರಿ ಖರ್ಚಿಗೂ ಸಾಕಾಗುತ್ತಿಲ್ಲ. ಕೂಡಲೇ ರಸ್ತೆಗಳ ಗುಂಡಿಗಳನ್ನು ಸರಿಪಡಿಸಿ ಅನುಕೂಲ ಒದಗಿಸಲಿ.
ಅನ್ವರ್ ಬಾಷಾ, ಗೂಡ್ಸ್ ವಾಹನ ಮಾಲೀಕ
ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಹಾರನಹಳ್ಳಿ ವಿಠಗೊಂಡನಕೊಪ್ಪ ರಸ್ತೆಯ ಸ್ಥಳಕ್ಕೆ ಸೆಕ್ಷನ್ ಅಕಾರಿಗಳೊಂದಿಗೆ ಹೋಗಿ ಭೇಟಿ ನೀಡಿದ್ದೇನೆ. ರಸ್ತೆ ಸಂಪೂರ್ಣ ಹಾಳಾಗಿದೆ. ಇದು ನನ್ನ ವ್ಯಾಪ್ತಿಗೆ ಬರುವುದಿಲ್ಲ. ಬಿಎಂಜಿಎಸ್‌ವೈ ವ್ಯಾಪ್ತಿಗೆ ಬರುತ್ತದೆ. ನಮಗೆ ಹಸ್ತಾಂತರ ಮಾಡಿದರೆ ಸಮಸ್ಯೆ ಬಗೆಹರಿಸುತ್ತೇವೆ.
ಮೋತಿಲಾಲ್, ಜಿಲ್ಲಾ ಪಂಚಾಯಿತಿ ಎಇಇ