

ಕೋಲಾರ: ಕರೊನಾ ಸೋಂಕು ಸರಪಣಿ ಮುರಿಯುವ ಸಲುವಾಗಿ ಸರ್ಕಾರ ಕರೆ ನೀಡಿರುವ ಸಂಡೇ ಲಾಕ್‌ಡೌನ್ ನಡುವೆಯೂ ಕೋಲಾರ ನಗರದಲ್ಲಿ ವಾಹನ ಸಂಚಾರ ಅಬಾಧಿತವಾಗಿದ್ದು, ಅತ್ಯವಶ್ಯಕ ಸೇವೆಗಳು ಹೊರತುಪಡಿಸಿ ಉಳಿದಂತೆ ಅಂಗಡಿಮುಂಗಟ್ಟು ಮುಚ್ಚಿದ್ದವು.
ರಾಜ್ಯದಲ್ಲಿ ಈ ಹಿಂದೆ ಘೋಷಿಸಿದ್ದ ಲಾಕ್‌ಡೌನ್ ಸಂದರ್ಭದಲ್ಲಿ ಕರೊನಾ ನಿಯಂತ್ರಣಕ್ಕೆ ಬಂದಿತ್ತಾದರೂ ಲಾಕ್‌ಡೌನ್ ನಿರ್ಬಂಧ ತೆರವುಗೊಳಿಸಿ ಒಂದು ತಿಂಗಳ ಸಂಡೇ ಲಾಕ್‌ಡೌನ್ ಘೋಷಣೆ ನಂತರ ಪ್ರತಿ ಭಾನುವಾರ ಲಾಕ್‌ಡೌನ್ ನಡೆಸಲಾಗುತ್ತಿದ್ದರೂ ಸೋಂಕಿನ ಪ್ರಕರಣ ಪ್ರತಿನಿತ್ಯ 5 ಸಾವಿರ ಮೀರುತ್ತಿದೆ. ಹಿಂದೆ ನಗರ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಪ್ರಕರಣಗಳು ಇತ್ತೀಚೆಗೆ ಹಳ್ಳಿಗಳಿಗೂ ಕಾಲಿಟ್ಟಿವೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಇರಲಿಲ್ಲ. ಕೃಷಿ ಉತ್ಪನ್ನ ಸಾಗಾಟ ಹಾಗೂ ಅತ್ಯವಶ್ಯಕ ಸಾಮಗ್ರಿಗಳ ಸರಕು ಸಾಗಾಣಿಕೆಗೆ ಅವಕಾಶ ಕಲ್ಪಿಸಲಾಗಿತ್ತಾದರೂ ಇದರ ನಡುವೆಯೇ ಎಲ್ಲ ವಾಹನಗಳ ಓಡಾಟ ಕಂಡುಬಂತು.
ಪ್ರಮುಖವಾಗಿ ಕೋಲಾರ ನಗರ ಕರೊನಾ ಹಾಟ್‌ಸ್ಪಾಟ್ ಆಗಿದ್ದರೂ ಜನ ಕ್ಯಾರೇ ಎನ್ನದೆ ಸೂರ್ಯೋದಯದಿಂದ ರಾತ್ರಿಯವರೆಗೂ ವಾಹನಗಳಲ್ಲಿ ಓಡಾಟ ಮುಂದುವರಿಸಿದ್ದರಿಂದ ರಸ್ತೆ ಬಿಕೋ ಎನ್ನುವ ವಾತಾವರಣ ಕಂಡುಬರಲೇ ಇಲ್ಲ.
ಕೆಲ ವೃತ್ತಗಳಲ್ಲಿ ಪೊಲೀಸರು ಕಾವಲು ಕಾದು ವಾಹನ ಸವಾರರನ್ನು ಪಡೆದು ಪ್ರಶ್ನಿಸಿದರಲ್ಲದೆ ವಾಹನ ಚಾಲನ ಪರವಾನಗಿ ಇನ್ನಿತರ ದಾಖಲೆ ಹೊಂದಿರದ ಸವಾರರಿಗೆ ದಂಡ ವಿಧಿಸಿದ್ದು ಕಂಡುಬಂತು. ಉಳಿದಂತೆ ವಾಹನ ಸಂಚಾರಕ್ಕೆ ಯಾವುದೇ ಅಡ್ಡಿ ಇರಲಿಲ್ಲವಾದ್ದರಿಂದ ಎಂದಿಗಿಂತ ವಾಹನ ಹಾಗೂ ಜನ ಸಂಚಾರ ವಿರಳವಾಗಿತ್ತು.
ಮೆಡಿಕಲ್ ಸ್ಟೋರ್, ಹಾಲು, ಹಣ್ಣು, ತರಕಾರಿ ಅಂಗಡಿ ಹಾಗೂ ಅಗತ್ಯ ವಸ್ತುಗಳ ಅಂಗಡಿ ಬಿಟ್ಟರೆ ಉಳಿದಂತೆ ಎಲ್ಲ ಅಂಗಡಿ ಮುಂಗಟ್ಟು, ಹೋಟೆಲ್ ಮುಚ್ಚಿದ್ದವು. ಬೆಳಗ್ಗೆ 11ರವರೆಗೆ ಕೆಲ ದಿನಸಿ ಅಂಗಡಿ ತೆರೆದಿದ್ದರಿಂದ ಸಾರ್ವಜನಿಕರು ದಿನಬಳಕೆ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು. ಮಧ್ಯಾಹದ ವೇಳೆಗೆ ಬಹುತೇಕ ಅಂಗಡಿ ಮುಚ್ಚಿದ್ದವು.
ರಸ್ತೆ ಅಭಿವೃದ್ಧಿ: ಸಂಡೇ ಲಾಕ್‌ಡೌನ್ ಹಿನ್ನೆಲೆಯಲ್ಲಿ ಜನ, ವಾಹನ ಸಂಚಾರ ವಿರಳವಾದ್ದರಿಂದ ಅಮೃತ ಯೋಜನೆಯಡಿ ಇಕ್ಕೆಲಗಳಲ್ಲಿ ಯುಜಿಡಿ ಸಂಪರ್ಕಕ್ಕೆಂದು ಪೈಪ್‌ಲೈನ್ ಅಗೆದು ಹದಗೆಟ್ಟಿದ್ದ ನಗರದ ಶಾರದಾ ಟಾಕೀಸ್ ರಸ್ತೆಗೆ ಮರು ಸಿಮೆಂಟ್ ರಸ್ತೆ ನಿರ್ಮಿಸುವ ಕಾಮಗಾರಿ ಭರದಿಂದ ಸಾಗಿತ್ತು.