ವಾಹನ ದಾಖಲಾತಿಗಳು ಇಲ್ಲದಿದ್ದರೆ ಕಾನೂನು ಕ್ರಮ

23HDK00003
Published on

ಎಚ್.ಡಿ.ಕೋಟೆ: ಪ್ಯಾಸೆಂಜರ್ ಆಟೋ ಚಾಲಕರು ಚಾಲನೆ ಹಾಗೂ ವಾಹನಕ್ಕೆ ಸಂಬಂಧಿಸಿದ ದಾಖಲಾತಿಗಳು ಇಲ್ಲದೆ ಇರುವವರು ಆ.5 ರೊಳಗೆ ದಾಖಲಾತಿ ಮಾಡಿಸಿಕೊಳ್ಳದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಗಂಗಾಧರ್ ಎಚ್ಚರಿಕೆ ನೀಡಿದರು.

ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಪ್ಯಾಸೆಂಜರ್ ಆಟೋ ಚಾಲಕರು ಮತ್ತು ಮಾಲೀಕರ ಸಭೆಯಲ್ಲಿ ಮಾತನಾಡಿ, ಪಟ್ಟಣದಲ್ಲಿ ಇರುವ ಬಹುತೇಕ ಪ್ಯಾಸೆಂಜರ್ ಆಟೋ ಚಾಲಕರು ಸಮವಸ್ತ್ರ ಧರಿಸದೆ ಆಟೋ ಚಾಲನೆ ಮಾಡುತ್ತಿರುವುದು ಕಂಡುಬಂದಿದೆ. ಇನ್ಮುಂದೆ ಸಮವಸ್ತ್ರ ಧರಿಸದೆ ಚಾಲನೆ ಮಾಡುವುದು ಕಂಡುಬಂದರೆ ಅಂತಹ ಚಾಲಕರ ಚಾಲನೆ ಪರವಾನಗಿ ರದ್ದು ಮಾಡಲಾಗುತ್ತದೆ ಎಂದರು.

ವಾಹನಕ್ಕೆ ಸಂಬಂಧಿಸಿದ ದಾಖಲಾತಿ ಇರಬೇಕು. ಕಡ್ಡಾಯವಾಗಿ ವಾಹನಕ್ಕೆ ವಿಮೆ ಇರುವಂತೆ ನೋಡಿಕೊಳ್ಳಬೇಕು. ಅನಾಮಧೇಯ ವ್ಯಕ್ತಿಗಳು ಪಟ್ಟಣಕ್ಕೆ ಬಂದರೆ ಮೊದಲು ಗೊತ್ತಾಗುವುದು ಆಟೋ ಚಾಲಕರಿಗೆ. ಹಾಗಾಗಿ ಅನುಮಾನ ಬಂದ ವ್ಯಕ್ತಿ ನಿಮ್ಮ ಗಮನಕ್ಕೆ ಬಂದರೆ ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡುವ ಮೂಲಕ ಅಪರಾಧ ತಡೆಯಲು ಸಹಕಾರ ನೀಡಬೇಕು. ನಿಲ್ದಾಣದಲ್ಲಿ ಯಾವುದೇ ಗೊಂದಲ ಉಂಟಾಗದಂತೆ ನೋಡಿಕೊಳ್ಳಬೇಕು. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು ಎಂದು ತಿಳಿಸಿದರು.

ಸಾರ್ವಜನಿಕರೊಂದಿಗೆ ಮತ್ತು ಪ್ರಯಾಣಿಕರೊಂದಿಗೆ ಸಂಯಮ, ಸೌಜನ್ಯದಿಂದ ವರ್ತಿಸಬೇಕು. ಯಾವುದೇ ಅಕ್ರಮ ಚಟುವಟಿಕೆಗಳ ಬಗ್ಗೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಆಟೋಗಳಿಗೆ ಸಂಬಂಧಿಸಿದ ದಾಖಲಾತಿಗಳನ್ನು ಪೊಲೀಸ್ ಠಾಣೆಗೆ ನೀಡಿ ನಂಬರ್ ಪಡೆಯಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ಅಧ್ಯಕ್ಷ ಚಲುವರಾಜು, ರವಿ, ಸಿದ್ದರಾಜು, ಪೊಲೀಸ್ ಸಿಬ್ಬಂದಿ ಯೋಗೇಶ್, ಸೈಯದ್ ಕಬ್ಬೀರ್ ಉದ್ದೀನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net