ವಾಹನ ದಟ್ಟಣೆ ನಿಯಂತ್ರಣಕ್ಕೆ ಪೋಲಿಸರ ಹರಸಾಹಸ

09Kush01
Published on

ಕುಶಾಲನಗರ: ವಾರಾಂತ್ಯ ಸಾಲು ರಜೆ ಹಾಗೂ ತಪಾಸಣೆ ಹಿನ್ನೆಲೆ ಪಟ್ಟಣದಲ್ಲಿ ಭಾನುವಾರ ವಾಹನ ದಟ್ಟಣೆ ಏರ್ಪಟ್ಟಿತು. ಅಂದಾಜು 4 ಕಿ.ಮೀ. ಗೂ ಹೆಚ್ಚು ದೂರ ಜಾಮ್ ಆಗಿದ್ದದ್ದ ವಾಹನಗಳ ದಟ್ಟಣೆ ನಿಭಾಯಿಸಲು ಪೊಲೀಸರು ಹರಸಾಹಸ ಪಡುವಂತಾಯಿತು.


ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಕೊಪ್ಪ ಚೆಕ್‌ಪೋಸ್ಟ್‌ನಲ್ಲಿ ಪ್ರತಿ ವಾಹನ ತಪಾಸಣೆ ನಡೆಸುತ್ತಿರುವುದರಿಂದ ಪಟ್ಟಣದಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವುದು ಸಾಮಾನ್ಯವಾಗಿದೆ. ಅಲ್ಲದೆ ಶುಕ್ರವಾರ, ಶನಿವಾರ, ಭಾನುವಾರ ರಜೆ ಇದ್ದ ಕಾರಣ ಕಾರಣ ಕೊಡಗು ಜಿಲ್ಲೆಯತ್ತ ಪ್ರವಾಸಿಗರ ದಂಡೇ ಆಗಮಿಸಿತ್ತು. ಇದರಿಂದ ಪಟ್ಟಣದ ರಸ್ತೆಗಳಲ್ಲಿ ಭಾನುವಾರ ಮತಷ್ಟು ಸಂಚಾರ ದಟ್ಟಣೆ ಏರ್ಪಟ್ಟು, ವಾಹನಗಳ ಸುಗಮ ಸಂಚಾರಕ್ಕೆ ಪೊಲೀಸರು ಹರಸಾಹಸಪಟ್ಟರು.


ಹಣ ವಶಕ್ಕೆ: ಭಾನುವಾರ ದ್ವಿಚಕ್ರ ವಾಹನದಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1,14,500 ರೂ.ವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸ್ಥಿರ ಕಣ್ಗಾವಲು ತಂಡದ ಮುಖ್ಯಸ್ಥ ನಾರಾಯಣ ರೆಡ್ಡಿ ವಿಜಯವಾಣಿಗೆ ತಿಳಿಸಿದ್ದಾರೆ.


26 ಸಿಬ್ಬಂದಿ 3 ಪಾಳಿಯಲ್ಲಿ ಕರ್ತವ್ಯ : ಕೊಪ್ಪ ಚೆಕ್‌ಪೋಸ್ಟ್‌ನಲ್ಲಿ 8 ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಲಾಗಿದೆ. ನಿತ್ಯವೂ 26 ಸಿಬ್ಬಂದಿ 3 ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲೆಗೆ ಪ್ರವೇಶಿಸುವ ವಾಹನಗಳನ್ನು ಕಟ್ಟುನಿಟ್ಟಾಗಿ ತಪಾಸಣೆ ನಡೆಸುತ್ತಿದ್ದು, ಜಿಲ್ಲೆಯಿಂದ ಹೊರಹೋಗುವ ವಾಹನಗಳನ್ನು ಮೈಸೂರು ಜಿಲ್ಲೆ ಪೊಲೀಸರು ತಪಾಸಣೆ ನಡೆಸುತ್ತಾರೆ ಎಂದು ಕುಶಾಲನಗರ ಡಿವೈಎಸ್ಪಿ ಗಂಗಾಧರಪ್ಪ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net