ವಾಸ್ತವ ಸಮಸ್ಯೆ ಅರಿಯಲು ಪ್ರಯತ್ನ

26Huk3
Published on

ಹುಕ್ಕೇರಿ: ರಾಜ್ಯ ಸರ್ಕಾರ ಕಂದಾಯ ಇಲಾಖೆಯಲ್ಲಿ ಸುಗಮ ಆಡಳಿತ ಹಾಗೂ ಜನರ ಅಲೆದಾಟ ತಪ್ಪಿಸಲು ಹಲವಾರು ಯೋಜನೆ ಜಾರಿಗೆ ತಂದಿದ್ದು, ಅವು ಸರಿಯಾಗಿ ಸಾರ್ವಜನಿಕರಿಗೆ ತಲುಪುತ್ತಿವೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ಹುಕ್ಕೇರಿ ತಹಸೀಲ್ದಾರ್ ಕಾರ್ಯಾಲಯಕ್ಕೆ ಆಗಮಿಸಿ ಮಾಹಿತಿ ಪಡೆದುಕೊಂಡಿದ್ದೇನೆ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ ಕಟಾರಿಯಾ ಹೇಳಿದರು.

ಇಲ್ಲಿನ ತಹಸೀಲ್ದಾರ್ ಕಚೇರಿಗೆ ಸೋಮವಾರ ಭೇಟಿ ನೀಡಿ ವಿವಿಧ ಕಡತ ಪರಿಶೀಲಿಸಿ ಮಾತನಾಡಿ, ಆರ್‌ಟಿಸಿ ದಾಖಲಾತಿಯಲ್ಲಿ ಕಂಡುಬರುತ್ತಿರುವ ಸಮಸ್ಯೆಗಳು ಹಾಗೂ ಅದಕ್ಕೆ ಸಂಬಂಧಿಸಿದ ಪ್ರಕರಣಗಳು ಕೋರ್ಟ್ನಲ್ಲಿ ಇರುವುದು ಸೇರಿ ವಿವಿಧ ಪ್ರಕಾರದ ವಾಸ್ತವಿಕ ಸಮಸ್ಯೆ ಅಧಿಕಾರಿಗಳಿಂದ ಕೇಳಿ ತಿಳಿದುಕೊಂಡಿದ್ದೇನೆ ಎಂದರು.

ನಂತರ ಭೂದಾಖಲೆ ಕೋಣೆಗೆ ಭೇಟಿ ನೀಡಿದ ಪ್ರಧಾನ ಕಾರ್ಯದರ್ಶಿಗಳು, ಕೈಯಿಂದ ಬರೆದ ಹಳೆಯ ಭೂದಾಖಲೆ ಪರಿಶೀಲಿಸಿ ಕಾಳಜಿಪೂರ್ವಕವಾಗಿ ಸಂರಕ್ಷಿಸಬೇಕೆಂದು ಅಧಿಕಾರಿಗಳಿಗೆ ಸಲಹೆ ನೀಡಿದರು. ಕಂಪ್ಯೂಟರ್ ವಿಭಾಗಕ್ಕೆ ಹೋಗಿ ದಾಖಲಾತಿ ಕುರಿತು ಮಾಹಿತಿ ಪಡೆದರು.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮತ್ತು ತಹಸೀಲ್ದಾರ್ ಮಂಜುಳಾ ನಾಯಕ ಪೂರಕ ಮಾಹಿತಿ ನೀಡಿದರು. ಬೆಳಗಾವಿ ಎಸಿ ಶ್ರವಣಕುಮಾರ ನಾಯಕ, ಗ್ರೇಡ್-೨ ತಹಸೀಲ್ದಾರ್ ಪ್ರಕಾಶ ಕಲ್ಲೋಳಿ, ಉಪತಹಸೀಲ್ದಾರ್ ನಾಗೇಂದ್ರ ಪಾಟೀಲ, ಗ್ರಾಮ ಅಭಿವೃದ್ಧಿ ಅಧಿಕಾರಿ ನಾಗನಗೌಡ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net