ವಾಸ್ತವ ಮರೆಯುತ್ತಿವ ಯುವ ಜನತೆ

16kglphoto1..
Published on

ಕೊಳ್ಳೇಗಾಲ: ಯುವ ಜನತೆ ಮೊಬೈಲ್ ಗೀಳಿಗೆ ಸಿಲುಕಿ ವಾಸ್ತವ ಹಾಗೂ ನಮ್ಮ ಸಂಸ್ಕೃತಿಯನ್ನೇ ಮರೆಯುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ.ಎಸ್.ದತ್ತೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದರು.


ಕನ್ನಡ ಸಾಹಿತ್ಯ ಪರಿಷತ್ತು, ಹಂಸಧ್ವನಿ ಸಾಂಸ್ಕೃತಿಕ ಟ್ರಸ್ಟ್, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಯೋಗದಲ್ಲಿ ಪಟ್ಟಣದ ಗುರುಭವನದಲ್ಲಿ ಸೋಮವಾರ ಆಯೋಜಿಸಿದ್ದ ಸಾಂಸ್ಕೃತಿಕ ಅಭಿಯಾನದಲ್ಲಿ ಮಾತನಾಡಿದರು.


21ನೇ ಶತಮಾನದಲ್ಲಿ ಅತ್ಯಂತ ವೇಗವಾಗಿ ವೈಜ್ಞಾನಿಕ ಹಾಗೂ ತಾಂತ್ರಿಕ ಕ್ಷೇತ್ರ ಬೆಳೆಯುತ್ತಿದೆ. ಆದರೆ ದುರದೃಷ್ಟವಶಾತ್ ಯುವ ಜನತೆ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದ್ದಾರೆ. ಮಕ್ಕಳಿಗೆ ಮೊಬೈಲ್ ಸುಲಭವಾಗಿ ಸಿಕ್ಕುತ್ತಿರುವ ಪರಿಣಾಮ ನೆನಪಿನ ಶಕ್ತಿ ಹಾಗೂ ಸಂಬಂಧಗಳನ್ನೇ ಮರೆಯುತ್ತಿದ್ದಾರೆ. ಬುದ್ಧ, ಬಸವೇಶ್ವರ, ಅಂಬೇಡ್ಕರ್, ಡಾ.ಶಿವಕುಮಾರಸ್ವಾಮಿ ಹಾಗೂ ಸಿದ್ದೇಶ್ವರ ಸ್ವಾಮಿಗಳು ಸಮಾಜಮುಖಿ ಕೆಲಸವನ್ನು ಮಾಡಿ ಇತಿಹಾಸ ಪುಟ ಸೇರಿದರು. ಇಂತಹ ಮಹಾನ್ ವ್ಯಕ್ತಿಗಳ ಆದರ್ಶದಲ್ಲಿ ನಾವೆಲ್ಲರೂ ಬದುಕಬೇಕು. ಆದರೆ ಯುವಜನತೆ ಮೊಬೈಲ್ಗೆ ದಾಸರಾಗಿ ಏನೂ ಬೇಡ ಎಂಬ ಸ್ಥಿತಿ ತಲುಪಿದ್ದಾರೆ. ಇದರಿಂದ ಮುಂದೆ ಅನಾಹುತ ತಪ್ಪಿದಲ್ಲ ಎಂದರು.


ಅಂದಿನ ಸಿನಿಮಾ, ಬರವಣಿಗೆ, ಸಾಹಿತ್ಯಗಳು ಬದುಕಿಗೆ ಪ್ರೇರಣೆ ಆಗುತ್ತಿತ್ತು. ಡಾ.ರಾಜ್ ಕುಮಾರ್ ಅವರ ಬಂಗಾರದ ಮನುಷ್ಯ ಸಿನಿಮಾ ನೋಡಿ ಎಷ್ಟೋ ಜನರು ರೈತರಾದರು. ಆದರೆ ಇವತ್ತಿನ ಸಿನಿಮಾ, ಬರವಣಿಗೆ, ಗೀತೆಗಳನ್ನು ನೋಡಿ ರೌಡಿಗಳಾಗುತ್ತಿದ್ದಾರೆ. ಅನಾಹುತಕ್ಕೆ ಸಿಲುಕುತ್ತಿದ್ದಾರೆ ಎಂದು ತಿಳಿಸಿದರು.


ಚಾಮರಾಜನಗರ ಸಾಂಸ್ಕೃತಿಕ ತವರಾಗಿದೆ.ಆದ್ದರಿಂದ ಮೊಬೈಲ್ ಬಿಟ್ಟು ಸಾಮಾಜಿಕ ಕಾರ್ಯಗಳಲ್ಲಿ ತೊಡಗಬೇಕು. ಒಗ್ಗೂಡಿ ನಾಡು, ನೆಲ, ಜಲ ಅಸ್ಮಿತೆ ಉಳಿವಿಗೆ ಬದ್ಧರಾಗಬೇಕು. ವಾಸ್ತವತೆಯಲ್ಲಿ ಬದುಕಬೇಕು. ಏನಾದರೂ ಸಾಧನೆ ಮಾಡಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಕಿವಿಮಾತು ಹೇಳಿದರು.


ಕಲಾವಿದ ಪ್ರೊ.ಎಸ್.ಮಲ್ಲಣ್ಣ ಮಾತನಾಡಿ, ಪ್ರಸ್ತುತ ಸದ್ದುಗದ್ದಲದ ಸಂಗೀತ ಕೇಳುವ ಯುವ ಜನತೆಗೆ ಸಂಗೀತ ಎಂದರೆ ಏನೆಂಬುದನ್ನು ತಿಳಿಸಬೇಕಿದೆ. ಅಲಮಪ್ರಭು ಅವರು ಹೇಳಿದಂತೆ ಸಂಗೀತ ನಿಶಬ್ದದೊಳಗಿನ ಶಬ್ದದಂತೆ ಇರಬೇಕು. ಅಂದಿನ ಸಾಹಿತ್ಯಕ್ಕೂ ಇಂದಿನ ಸಾಹಿತ್ಯಕ್ಕೂ ಬಹಳಷ್ಟು ವ್ಯತ್ಯಾಸವಿದೆ ಎಂದರು.

ಗೀತಗಾಯನ: ವೇದಿಕೆ ಕಾರ್ಯಕ್ರಮದ ಬಳಿಕ ಕನ್ನಡ ಭಾವಗೀತೆ, ಜನಪದಗೀತೆ, ಹಳೆಯ ಚಿತ್ರಗೀತೆ ಹಾಗೂ ವಚನ ಸಂಗೀತ ಕಾರ್ಯಕ್ರಮ ನಡೆಯಿತು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ.ಎಸ್.ದತ್ತೇಶ್‌ಕುಮಾರ್, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್. ನಾಗರಾಜು ಕೊಂಗರಹಳ್ಳಿ, ಪ್ರಧಾನ ಕಾರ್ಯದರ್ಶಿ ಚಿಕ್ಕರಾಜು, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀಧರ್, ಕಲಾವಿದರಾದ ಮಲ್ಲಣ್ಣ, ದಿವಶ್ರೀ, ಸೋಮ ಶೇಖರ್, ಸಾಹಿತ್ಯ ಮಿತ್ರಕೂಟ ಅಧ್ಯಕ್ಷ ದೊಡ್ಡಲಿಂಗೇಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net