

ಚಿಕ್ಕಮಗಳೂರು: ಬಡವರು ಹಾಗೂ ಶೋಷಿತ ವರ್ಗದ ಕುಟುಂಬಗಳು ಉತ್ತಮ ಶಿಕ್ಷಣ ಪಡೆಯುವ ಮೂಲಕ ಸಮಾಜದ ಮುನ್ನಲೆಗೆ ಬರಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಕರೆ ನೀಡಿದರು.
ವಿಧಾನಸಭಾ ಕ್ಷೇತ್ರದ ಬಾಣೂರು ಗ್ರಾಪಂ ವ್ಯಾಪ್ತಿಯಲ್ಲಿ ಏರ್ಪಡಿಸಲಾಗಿದ್ದ ರಾಜ್ಯಸರ್ಕಾರದ ವಿಶೇಷ ಯೋಜನೆ ವಾಸಿಸುವವನೇ ಮನೆಯ ಒಡೆಯ ಯೋಜನೆಯಡಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ಡಿ.ದೇವರಾಜು ಅರಸು ಅಧಿಕಾರವಧಿಯಲ್ಲಿ ಉಳುವವನೇ ಭೂಮಿ ಒಡೆಯ ಎಂಬ ಯೋಜನೆಯನ್ನು ಜಾರಿಗೆ ತಂದು ಹಕ್ಕುಪತ್ರ ನೀಡಿದ ಮಾದರಿಯಲ್ಲೇ ಇದೀಗ ರಾಜ್ಯಸರ್ಕಾರ ವಾಸಿಸುವವನೇ ಮನೆಯ ಒಡೆಯ ಯೋಜನೆ ಜಾರಿಮಾಡಿ ಬಡವರಿಗೆ ಹಕ್ಕುಪತ್ರ ನೀಡುತ್ತಿದೆ ಎಂದರು.
ಮುಖ್ಯಮAತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಂದಾಯ ಸಚಿವ ಕೃಷ್ಣಭೈರೇಗೌಡ ಹಾಗೂ ಶಾಸಕರ ನೇತೃತ್ವದಲ್ಲಿ ಈ ಯೋಜನೆಯಡಿ ಗ್ರಾಮಗಳಲ್ಲಿನ ಬಡ ಫಲಾನುಭವಿಗಳನ್ನು ಗುರುತಿಸಿ ಹಕ್ಕುಪತ್ರಗಳನ್ನು ನೀಡುತ್ತಿರುವ ಜೊತೆಗೆ ಕಂದಾಯ ಗ್ರಾಮ ಮತ್ತು ಕಂದಾಯ ಉಪಗ್ರಾಮಗಳನ್ನು ಆಯ್ಕೆಮಾಡಲಾಗಿದೆ ಎಂದು ಹೇಳಿದರು.
ಸರ್ಕಾರದ ಈ ಯೋಜನೆಯ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ನಿಮ್ಮ ಕುಟುಂಬದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಕಿವಿಮಾತು ಹೇಳಿದರು.
ಭದ್ರಾ ಉಪಕಣಿವೆ ಯೋಜನೆಯ ಮೂರನೇ ಹಂತದ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸದ್ಯದಲ್ಲೇ ಗುದ್ದಲಿ ಪೂಜೆ ನೆರವೇರಿಸಲಿದ್ದು, ನಂತರ ಈ ಭಾಗದ ಕೆರೆಗಳನ್ನು ತುಂಬಿಸುವ ಯೋಜನೆ ಜಾರಿಯಾಗಲಿದೆ ಎಂದು ಭರವಸೆ ನೀಡಿದರು.
ರೈತರ ತೆಂಗು, ಅಡಕೆ, ಶುಂಠಿ, ಟೊಮೆಟೋ ಮುಂತಾದ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರಕಿದಾಗ ರೈತರು ಹಾಗೂ ರೈತಕಾರ್ಮಿಕರು ಸಂತೋಷವಾಗಿರುತ್ತಾರೆ ಎಂದು ತಿಳಿಸಿದರು.
ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದು ಅನುಷ್ಠಾನಗೊಳಿಸಿರುವ ರಾಜ್ಯಸರ್ಕಾರ ಬಡವರ, ಶೋಷಿತರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಿ ಸದೃಢಗೊಳಿಸಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಾಣೂರು ಗ್ರಾಪಂ ಅಧ್ಯಕ್ಷೆ ಸುನಂದಮ್ಮ, ಸದಸ್ಯರಾದ ಉಮಾ ಭಾರ್ಗವ್, ಅಜ್ಜಯ್ಯ, ನವೀನ್, ಮಂಜುಳ, ಮಮತ, ಯಶೋಧ, ಕಡೂರು ತಹಸೀಲ್ದಾರ್ ಪೂರ್ಣಿಮ, ಇಓ ಪ್ರವೀಣ್, ರಾಜಸ್ವ ನಿರೀಕ್ಷಕ ರವಿ, ತಾಪಂ ಮಾಜಿ ಸದಸ್ಯ ಧನಂಜಯ್ ಉಪಸ್ಥಿತರಿದ್ದರು.