ವಾಲ್ಮೀಕಿ ಭವನ ಮಂಜೂರಿ ಮಾಡಿ

valmiki samaj
Published on

ಬೀದರ್: ಬೀದರ್ ನಗರದಲ್ಲಿ ಮಹರ್ಷಿ ವಾಲ್ಮೀಕಿ ಸಮುದಾಯ ಭವನ ಮಂಜೂರು ಮಾಡಿ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಜಿಲ್ಲಾ ಮಹರ್ಷಿ ವಾಲ್ಮೀಕಿ ಸಮಾಜ ಸಂಘ ಆಗ್ರಹಿಸಿದೆ.

ಸಂಘದ ಅಧ್ಯಕ್ಷ ಶರಣಪ್ಪ ಖಾಶೆಂಪುರ ನೇತೃತ್ವದ ನಿಯೋಗ ಬೆಂಗಳೂರಿನಲ್ಲಿ ಸಮಾಜಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರನ್ನು ಭೇಟಿ ಮಾಡಿ ಮನವಿಪತ್ರ ಸಲ್ಲಿಸಿ, ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ವಾಲ್ಮೀಕಿ ಸಮುದಾಯದ ಜನರಿದ್ದಾರೆ. ಸಮಾಜ ಬಾಂಧವರು ಮದುವೆ, ಸಾಂಸ್ಕೃತಿಕ ಚಟುವಟಿಕೆ ಸೇರಿದಂತೆ ವಿವಿಧ ಕಾರ್ಯಕ್ರಮ ಮಾಡಲು ಭವನ ಇಲ್ಲ. ಕಲ್ಯಾಣ ಮಂಟಪಗಳಿಗೆ ಬಾಡಿಗೆ ಹಣ ಕೊಡುವಷ್ಟು ಆರ್ಥಿಕ ಸಂಪನ್ನ ಸಮಾಜವಿಲ್ಲ. ಹೀಗಾಗಿ ಭವನ ಅಗತ್ಯವಿದೆ ಎಂದು ಗಮನ ಸೆಳೆದಿದ್ದಾರೆ.

ಸಾಕಷ್ಟು ಪ್ರಯತ್ನದ ನಂತರ ಭವನಕ್ಕಾಗಿ 1 ಕೋಟಿ ರೂ. ಅನುದಾನ ಮಂಜೂರಿ ಆಗಿದೆ. 20 ಗುಂಟೆ ಭೂಮಿಯನ್ನು ಜಿಲ್ಲಾಡಳಿತ ಮಂಜೂರಿ ಮಾಡಿದೆ. ಆದರೆ ಈವರೆಗೆ ಮಂಜೂರಾದ ಸ್ಥಳದಲ್ಲಿ ಭವನ ನಿರ್ಮಾಣ ಆಗಿಲ್ಲ. ಈ ಬಗ್ಗೆ ಸಂಬಂಧಿಸಿದವರಿಗೆ ಭೇಟಿ ಮಾಡಿ ವಿಚಾರಿಸಿದರೆ ಮಾಹಿತಿ ನೀಡುತ್ತಿಲ್ಲ. ವಾಲ್ಮೀಕಿ ಭವನ ಮಂಜೂರು ಮಾಡಿ, ಕೂಡಲೇ ಅನುದಾನ ಬಿಡುಗಡೆ ಮಾಡಲು ಆಗ್ರಹಿಸಿದ್ದಾರೆ. ನಿಯೋಗದಲ್ಲಿ ಮಾರುತಿ ಮಾಸ್ಟರ್ ಇತರರಿದ್ದರು.

ಪ್ರತ್ಯೇಕ ಅಧಿಕಾರಿ ನೇಮಿಸಿ
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಪ್ರತ್ಯೇಕ ಜಿಲ್ಲಾ ವ್ಯವಸ್ಥಾಪಕ ಮತ್ತು ತಾಲೂಕು ಅಧಿಕಾರಿಗಳನ್ನು ನೇಮಿಸುವಂತೆಯೇ ಸಂಘದ ನಿಯೋಗ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದೆ. ಜಿಲ್ಲೆಯಲ್ಲಿ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಡಾ.ಅಂಬೇಡ್ಕರ್ ನಿಗಮಕ್ಕೆ ಒಬ್ಬರೇ ಜಿಲ್ಲಾ ವ್ಯವಸ್ಥಾಪಕರಿದ್ದಾರೆ. ಕೂಡಲೇ ಪ್ರತ್ಯೇಕ ಅಧಿಕಾರಿಗಳನ್ನು ನೇಮಕ ಮಾಡಲು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net