

ಹಾಸನ: ವಾಲ್ಮೀಕಿ ನಿಗಮದಲ್ಲಿ ಸರ್ಕಾರಿ ಹಣದ ವರ್ಗಾವಣೆಯ ಗೋಲ್‌ಮಾಲ್ ವಿರೋಧಿಸಿ ಹಾಗೂ ಅನ್ಯಾಯಕ್ಕೊಳಗಾದ ಎಸ್.ಟಿ. ಸಮುದಾಯಕ್ಕೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಎನ್.ಆರ್. ವೃತ್ತದಲ್ಲಿ ಕೆಲ ಸಮಯ ಮಾನವ ಸರಪಳಿ ನಿರ್ಮಿಸಿ ನಂತರ ಬಿ.ಎಂ. ರಸ್ತೆ ಮೂಲಕ ಜಿಲ್ಲಾಧಿಕಾರಿ ಕಛೇರಿ ಆವರಣಕ್ಕೆ ಆಗಮಿಸಿ ನಂತರ ಕಚೇರಿಗೆ ನುಗ್ಗಲು ಯತ್ನಿಸಿದರು ಪೊಲೀಸರು ಮುಂಜಾಗ್ರತವಾಗಿ ಬ್ಯಾರಿಕೇಡ್‌ಗಳನ್ನು ಜಿಲ್ಲಾಧಿಕಾರಿ ಕಚೇರಿಯ ಮುಂದೆ ಹಾಕಲಾಗಿತ್ತು. ಪ್ರತಿಭಟಕಾರರು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.ನಂತರ ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ಹಣ ವರ್ಗಾವಣೆಯ ಅವ್ಯವಹಾರ ನಡೆದಿದೆ. ಈ ಹಣ ಕಾಂಗ್ರೆಸ್‌ನ ಚುನಾವಣಾ ವೆಚ್ಚಕ್ಕೆ ಬಳಕೆಯಾಗಿರುವ ಶಂಕೆ ಇದೆ. ನಿಗಮದ ಎಂ.ಡಿ.ಪದ್ಮನಾಭ್ ವ್ಯವಹಾರದಲ್ಲಿ ನಡೆದಿರುವುದರಲ್ಲಿ ತನ್ನ ಸಹಿಯನ್ನು ಪೋರ್ಜರಿ ಮಾಡಲಾಗಿದೆ ಎನ್ನುತ್ತಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು.ಹಣಕಾಸು ಸಚಿವರಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಇದಕ್ಕೆ ಹೊಣೆಯಾಗಬೇಕು. ಸಚಿವ ನಾಗೇಂದ್ರ ರಾಜೀನಾಮೆಯೊಂದೇ ಇದಕ್ಕೆ ಪರಿಹಾರವಲ್ಲ ಇದರ ಹಿಂದಿರುವ ಕಾಣದ ಕೈಗಳು ಹೊರಬರಬೇಕು ಎಂದು ಒತ್ತಾಯಿಸಿದರು.
700ಕ್ಕೂ ಅಧಿಕ ನಕಲಿ ಖಾತೆಗಳಿಗೆ ಹಣ ವರ್ಗಾವಣೆ ಮಾಡುವ ಮೂಲಕ ಹಣ ದುರ್ಬಳಕೆ ಆಗಿದೆ. ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ದಾವಣಗೆರೆ, ತೆಲಂಗಾಣದ ಹೈದರಾಬಾದ್ ಗಳಲ್ಲಿ ಖಾತೆ ತೆರೆಯಲಾಗಿತ್ತು ಎಂಬುದು ಇಲ್ಲಿ ಗಮನಾರ್ಹ ಅಂಶವಾಗಿದೆ ಎಂದು ದೂರಿದರು. ಕೂಲಿ ಕಾರ್ಮಿಕರು, ದನ, ಎಮ್ಮೆ ಕಾಯುವ ಅಮಾಯಕ ವ್ಯಕ್ತಿಗಳಿಗೆ 2 ಲಕ್ಷದಿಂದ 5 ಲಕ್ಷದವರೆಗೆ ಹಣ ಹಾಕಿ ವಿತ್ ಡ್ರಾ ಮಾಡಿ ಲೋಕಸಭಾ ಚುನಾವಣೆಗೆ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿದರು.
ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕೆ ಬಿಡುಗಡೆಯಾದ ಹಣದ ಅವ್ಯವಹಾರ ನಡೆಸಿ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಪಂಗಡಕ್ಕೆ ದ್ರೋಹ ಮಾಡಿದೆ. ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಹಿಂದುಳಿದ ವರ್ಗಗಳ ಸಮುದಾಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮೀಸಲಿರಿಸಿದ್ದ ಸುಮಾರು 24 ಸಾವಿರ ಕೋಟಿ ರೂ.ಗಳನ್ನು ಕಾಂಗ್ರೆಸ್ ಸರ್ಕಾರ ಇತರೆ ಯೋಜನೆಗಳಿಗೆ ಬಳಸಿಕೊಂಡಿರುವುದು. ಆ ಸಮುದಾಯಕ್ಕೆ ಮಾಡಿದ ಅನ್ಯಾಯ ಎಂದು ದೂರಿದರು.
ನಿಗಮದ ಅಧಿಕಾರಿ ಚಂದ್ರಶೇಖರ್ ಅವರ ಆತ್ಮಹತ್ಯೆಯ ಡೆತ್ ನೋಟ್‌ನಲ್ಲಿ ಸ್ಪಷ್ಟವಾಗಿ ಸಚಿವರ ಮೌಖಿಕ ಆದೇಶ ಎಂದು ಬರೆದಿದ್ದರೂ, ಇದೂವರೆಗೂ ಈ ಪ್ರಕರಣದಲ್ಲಿ ಯಾವುದೇ ತನಿಖಾ ಸಂಸ್ಥೆಯಿಂದ ಇದುವರೆಗೂ ಸಚಿವರನ್ನು ತನಿಖೆಗೊಳಪಡಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ದುರಂತವೆಂದರೆ ಎಸ್ಟಿ ಮೀಸಲು ಕ್ಷೇತ್ರಗಳಿಂದ ಗೆದ್ದ ಕರ್ನಾಟಕದ ಶಾಸಕರುಗಳು ಈ ಸಮುದಾಯಕ್ಕೆ ಇಷ್ಟು ಅನ್ಯಾಯವಾದರೂ ಸಹ ಮೌನವಾಗಿರುವುದು ಈ ಸಮುದಾಯಕ್ಕೆ ಮಾಡಿದ ದ್ರೋಹವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಮೀತ್ ಶೆಟ್ಟಿ, ಜಿಜೆಪಿ ಮುಖಂಡರಾದ ಬಿ.ಹೆಚ್. ನಾರಾಯಣಗೌಡ, ಹರ್ಷಿತ್, ರವಿಕುಮಾರ್, ಶೋಭನ್ ಬಾಬು, ಚನ್ನಕೇಶವ, ಪ್ರೀತಿವರ್ಧನ್, ವೇಧವತಿ, ವಿಜಯಲಕ್ಷ್ಮಿ, ರತ್ನಪ್ರಕಾಶ್ ಇತರರು ಇದ್ದರು.