ವಾಲ್ಮೀಕಿ ಜನಾಂಗದ ಮೀಸಲಾತಿಗೆ ಹೋರಾಟ ಅನಿವಾರ್ಯ ; ರಾಜನಹಳ್ಳಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅಭಿಮತ

gubbi lead
Published on

ಗುಬ್ಬಿ ; ರಾಜಕೀಯ ಪಕ್ಷಗಳು ವಾಲ್ಮೀಕಿ ಜನಾಂಗವನ್ನು ಕೇವಲ ಮತ ಬ್ಯಾಂಕ್ ಆಗಿ ಪರಿಗಣಿಸಿದ್ದು ಸಮುದಾಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟದ ಹಾದಿ ತುಳಿಯುವುದು ಅನಿವಾರ್ಯ ಎಂದು ಹರಿಹರ ತಾಲೂಕಿನ ರಾಜನಹಳ್ಳಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.

ನಿಟ್ಟೂರಿನಲ್ಲಿ ಭಾನುವಾರ ಶಿವಭಕ್ತ ಬೇಡರ ಕಣ್ಣಪ್ಪಸ್ವಾಮಿ ನೂತನ ದೇವಾಲಯ, ಗೋಪುರ, ಸ್ಥಿರಬಿಂಬ ಹಾಗೂ ಮಹರ್ಷಿ ವಾಲ್ಮೀಕಿ ಪುತ್ಥಳಿ ಉದ್ಘಾಟನೆ ಮಾಡಿ ಮಾತನಾಡಿದ ಶ್ರೀಗಳು, ಸಂವಿಧಾನದಲ್ಲಿ ಮೀಸಲಾತಿ ನೀಡಿದ್ದ ಪರಿಣಾಮ ಸಮುದಾಯವು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿದೆಯಾದರೂ ಸುಮಾರು 50 ಲಕ್ಷ ಜನಸಂಖ್ಯೆ ಇರುವ ಈ ಸಮುದಾಯಕ್ಕೆ ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಿಸಬೇಕಾದ ಅಗತ್ಯವಿದೆ ಎಂದು ಆಗ್ರಹಿಸಿದರು.

ಜನಪ್ರತಿನಿಧಿಗಳು ಚುನಾವಣೆ ಸಂದರ್ಭದಲ್ಲಿ ಮೀಸಲಾತಿ ಕಲ್ಪಿಸುವ ಬಗ್ಗೆ ಧ್ವನಿ ಎತ್ತುತ್ತಾರೆ. ನಂತರ ಕಡೆಗಣಿಸುತ್ತಾರೆ. ಹಾಗಾಗಿ, ಶೇ.7.5 ಮೀಸಲಾತಿ ಹೆಚ್ಚಳ ಹೋರಾಟ ಮುಂದುವರಿಸಲಾಗುವುದು ಎಂದರು.

ಗುರುವಿನ ಮಾರ್ಗದರ್ಶನದಂತೆ ಸನ್ಮಾರ್ಗದಲ್ಲಿ ನಡೆಯುತ್ತಾ ಗುರಿ ತಲುಪಬೇಕಾಗಿದೆ. ಮನುಷ್ಯ ತನ್ನಲ್ಲಿರುವ ಜ್ಞಾನ ಸಂಪತ್ತನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳದೆ ಅನೇಕ ಅವಾಂತರಗಳಿಗೆ ಕಾರಣರಾಗುತ್ತಿದ್ದಾನೆ ಎಂದು ಬೆಟ್ಟದಹಳ್ಳಿ ಗವಿಮಠದ ಚಂದ್ರಶೇಖರ ಸ್ವಾಮೀಜಿ ಹೇಳಿದರು.

ಮನುಜ ಗಳಿಕೆಯತ್ತ ಗಮನಹರಿಸಿ ಶಾಂತಿ ,ಪ್ರೀತಿ ,ವಿಶ್ವಾಸಗಳನ್ನು ಕಳೆದುಕೊಳ್ಳುತ್ತಿದ್ದಾನೆ ಎಂದ ಆವರು ದುಡಿಮೆಯ ಒಂದಂಶವನ್ನು ಧರ್ಮಕಾರ್ಯಕ್ಕೆ ನೀಡುವ ಮನೋಭಾವನೆ ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಶಾಸಕ ಎಸ್.ಆರ್.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಅಧ್ಯಕ್ಷೆ ಶಾಂತಲಾ ರಾಜಣ್ಣ, ಮಾಜಿ ಸದಸ್ಯ ಚಂದ್ರಶೇಖರ್ ಬಾಬು, ಬೇಡರಕಣ್ಣಪ್ಪ ಸೇವಾ ಸಮಿತಿ ಅಧ್ಯಕ್ಷ ರಾಮಚಂದ್ರಮೂರ್ತಿ, ಕಾರ್ಯಾಧ್ಯಕ್ಷ ಕುಮಾರಸ್ವಾಮಿ, ಉಪಾಧ್ಯಕ್ಷ ಜಯಾನಂದ, ಕೃಷ್ಣಮೂರ್ತಿ, ಕಾರ್ಯದರ್ಶಿ ರಾಮಚಂದ್ರಯ್ಯ, ಖಜಾಂಚಿ ಗಿರಿ ನಾಯಕ್, ನಿರ್ದೇಶಕರಾದ ತಾತನಾಯಕ, ಸಿದ್ದಗಂಗಯ್ಯ, ಕುಮಾರ್, ಅಮಿತಾ ,ತಿಮ್ಮಯ್ಯ, ವಕೀಲರಾದ ಶಾಂತ, ಮುಖಂಡರಾದ ಅನುಸೂಯ,ರಾಮಸ್ವಾಮಿ, ಗ್ರಾಪಂ ಅಧ್ಯಕ್ಷ ಪುರುಷೋತ್ತಮ್, ಸದಸ್ಯರಾದ ಸಂತೋಷ್, ನರಸಯ್ಯ ,ಜಗದೀಶ್, ಹೇಮಂತ್, ಮಾಜಿ ಅಧ್ಯಕ್ಷ ಗಿರೀಶ್, ಮುಖಂಡರಾದ ಎಸ್.ಡಿ.ದಿಲೀಪ್ ಕುಮಾರ್, ಎನ್.ಸಿ.ನಂಜಪ್ಪ, ದೇವಸ್ಥಾನದ ಶಿಲ್ಪಿ ಗಣೇಶನ್ ಮತ್ತಿತರರು ಉಪಸ್ಥಿತರಿದ್ದರು.

ತ್ಯಾಗ ಮನೋಭಾವನೆಯಿಂದ ಗಣ ಪದವಿ ಪಡೆದ ಕಣ್ಣಪ್ಪ ಸ್ವಾಮಿ ದೇಗುಲ ಹಾಗೂ ವಾಲ್ಮೀಕಿ ಮಹರ್ಷಿಗಳ ಪ್ರತಿಮೆ ಸ್ಥಾಪಿಸುವುದರ ಮೂಲಕ ಇಲ್ಲಿನ ಜನತೆ ಉತ್ತಮ ಕಾರ್ಯ ಮಾಡಿದ್ದಾರೆ. ಇದು ಕೇವಲ ಒಂದೇ ಜಾತಿಗೆ ಸೀಮಿತ ವಾಗಿರದೆ ಜಾತ್ಯತೀತವಾಗಿ ಎಲ್ಲರೂ ಸಹಕರಿಸುವುದರಿಂದ ಇಂತಹ ಮಹತ್ಕಾರ್ಯ ಮಾಡಲು ಸಾಧ್ಯವಾಗಿದೆ. ಶ್ರೀ ಸಂಜಯ ಕುಮಾರ ಸ್ವಾಮೀಜಿ, ಶಿಡ್ಲೇಕೋಣ ವಾಲ್ಮೀಕಿ ಗುರುಪೀಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net