

ಮೈಸೂರು: ವಾಲ್ಮೀಕಿ ಮಹರ್ಷಿ ರಚಿಸಿರುವ ರಾಮಾಯಣ ಸೂರ್ಯ, ಚಂದ್ರರು ಇರುವವರೆವಿಗೂ ಜಗತ್ತಿನಲ್ಲಿ ಅಮರ ಕಾವ್ಯವಾಗಿರುತ್ತದೆ. ಜತೆಗೆ ವಾಲ್ಮೀಕಿ ಅವರ ಹೆಸರೂ ಅಜರಾಮವಾಗಿರಲಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಮೈಸೂರು ನಗರ ಮತ್ತು ತಾಲೂಕು ನಾಯಕ ಜನಾಂಗದ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಕಲಾಮಂದಿರದಲ್ಲಿ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿ ಅವರು ಮಾತನಾಡಿದರು.
ಅನೇಕ ಆದರ್ಶಗಳು, ಜೀವನದ ಮೌಲ್ಯವನ್ನು ರಾಮಾಯಣ ಧರ್ಮಗ್ರಂಥ ಹೊಂದಿದೆ. ರಾಮಾಯಣದ ಆದರ್ಶ ಅನುಕರಣೀಯ. ರಾಮಾಯಣದ ಜತೆಗೆ ಮಹಾಭಾರತ ಕೂಡಾ ದೇಶದ ಮೇರುಕೃತಿಯಾಗಿದ್ದು, ಇವುಗಳಿಂದ ತಿಳಿದುಕೊಳ್ಳಬೇಕಾಗಿರುವುದು ಸಾಕಷ್ಟಿದೆ ಎಂದರು.
ಜೀವನದ ಮೌಲ್ಯ ತಿಳಿಸುವ ರಾಮಾಯಣ, ಮಹಾಭಾರತ ಗ್ರಂಥಗಳು ಸಾವಿರಾರು ವರ್ಷಗಳಿಂದ ಬೆಳೆದು ಬಂದಿದ್ದು, ಇನ್ನೂ ಸಾವಿರಾರು ವರ್ಷಗಳು ಹಾಗೆಯೇ ಇರುತ್ತವೆ. ಸೂರ್ಯ, ಚಂದ್ರ ಇರುವವರೆಗೂ ಗ್ರಂಥಗಳು, ಗ್ರಂಥ ಬರೆದವರ ಹೆಸರು ಇರುತ್ತದೆ ಎಂದು ಹೇಳಿದರು.
ವಾಲ್ಮೀಕಿಯವರ ಮೂಲ ಹೆಸರು ರತ್ನಾಕರ ಎಂದಿತ್ತು, ಬ್ರಹ್ಮದೇವರನ್ನು ಮೆಚ್ಚಿಸಲು ಮತ್ತು ತನ್ನ ಪಾಪ ಕೃತ್ಯಗಳ ಬಗ್ಗೆ ಕ್ಷಮೆ ಕೇಳಲು ರತ್ನಾಕರನು ಕಠಿಣ ತಪಸ್ಸು ಮಾಡಿದನೆಂದು ಹೇಳಲಾಗುತ್ತದೆ. ಹೀಗೆ ತಪಸ್ಸಿನಲ್ಲಿದ್ದ ರತ್ನಾಕರನ ಸುತ್ತ, ಮೈಮೇಲೆ ಗೆದ್ದಲುಗಳ ದಪ್ಪ ಪದರದ ಹುತ್ತ ಬೆಳೆಯುತ್ತದೆ. ಇದರ ಅರಿವೇ ಇಲ್ಲದೆ ರತ್ನಾಕರ ತಪಸ್ಸು ಮುಂದುವರಿಸುತ್ತಾನೆ. ರತ್ನಾಕರನ ತಪಸ್ಸಿಗೆ ಮೆಚ್ಚಿದ ಬ್ರಹ್ಮ, ರತ್ನಾಕರನಿಗೆ ವಾಲ್ಮೀಕಿ ಎಂದು ನಾಮಕರಣ ಮಾಡಿದರು ಎಂದು ಐತಿಹ್ಯ ಇದೆ ಎಂದರು.
ಪ್ರತಿ ವರ್ಷ ಮಹರ್ಷಿ ವಾಲ್ಮೀಕಿಯ ಜಯಂತಿಯನ್ನು ಆಶ್ವಯುಜ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ, ಸಂಸ್ಕೃತ ಭಾಷೆಯ ಅತ್ಯುನ್ನತ ವಿದ್ವಾಂಸರಾದ ವಾಲ್ಮೀಕಿಯವರ ಜಯಂತಿಯನ್ನು ವಾಲ್ಮೀಕಿ ಸಮಾಜ ಮಾತ್ರವಲ್ಲದೆ ಎಲ್ಲ ಸಮಾಜದವರು ಆಚರಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಲ್. ನಾಗೇಂದ್ರ ಮಾತನಾಡಿ, ಸಾಮಾನ್ಯ ವರ್ಗದಲ್ಲಿ ಹಲವು ಸದಸ್ಯರು ಇದ್ದರೂ ನಾಯಕ ಸಮಾಜಕ್ಕೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಶಿವಕುಮಾರ್ ಅವರನ್ನು ಮೇಯರ್ ಮಾಡಲಾಗಿದೆ. ಒಬ್ಬ ಆದಿವಾಸಿ ಮಹಿಳೆ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಲಾಯಿತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಿಸಲು ಬಿಜೆಪಿ ಸರ್ಕಾರ ಐತಿಹಾಸಿಕ ತೀರ್ಮಾನ ಮಾಡಿದ್ದರಿಂದ ಬಹುದಿನಗಳ ಬೇಡಿಕೆ ಈಡೇರಿಸಲಾಗಿದೆ ಎಂದರು.
ಮುಖ್ಯ ಭಾಷಣ ಮಾಡಿದ ಹುಣಸೂರು ತಾಲೂಕು ಹರದನಹಳ್ಳಿ ಸರ್ಕಾರಿ ಮಹಿಳಾ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಬಿ. ನಂಜುಂಡಸ್ವಾಮಿ, ರಾಮಾಯಣದಂತ ಕೃತಿ ನಮಗೆ ಲಭಿಸಿರುವುದು ಹೆಮ್ಮೆಯ ಸಂಗತಿ. ವಾಲ್ಮೀಕಿ ರಚಿಸಿರುವ ರಾಮಾಯಣವು ಜೀವನ, ಪ್ರೀತಿ, ನಂಬಿಕೆ, ಆಚರಣೆ ಇವೆಲ್ಲವನ್ನೂ ಕಟ್ಟಿಕೊಟ್ಟಿರುವ ಒಂದು ಗ್ರಂಥವಾಗಿದೆ ಎಂದು ತಿಳಿಸಿದರು.
ಮೇಯರ್ ಶಿವಕುಮಾರ್ ಮಾತನಾಡಿ, ಭಾರತೀಯ ಪರಂಪರೆ, ಸಂಸ್ಕೃತಿಗೆ ರಾಮಾಯಣ ಗ್ರಂಥ ಪೂರಕವಾಗಿದ್ದು, ಇಡೀ ಜಗತ್ತಿಗೆ ಆದರ್ಶವಾಗಿದೆ. ವಾಲ್ಮೀಕಿ ಜಯಂತಿಗೆ ಸರ್ಕಾರಿ ರಜಾ ದಿನ, ವಾಲ್ಮೀಕಿ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಜಿಲ್ಲಾ ಮಟ್ಟದಲ್ಲಿ ವಾಲ್ಮೀಕಿ ಭವನನಿರ್ಮಾಣಕ್ಕೆ ಅನುದಾನ ಕೊಡಲಾಯಿತು. 30 ವರ್ಷದಿಂದ ನೆನಗುದಿಗೆ ಬಿದ್ದಿದ್ದ ತಳವಾರ ಮತ್ತು ಪರಿವಾರವನ್ನು ಎಸ್‌ಟಿ ಪ್ರವರ್ಗಕ್ಕೆ ಸೇರಿಸುವ ಮೂಲಕ ನಮ್ಮ ಸರ್ಕಾರ ಅನುಕೂಲ ಮಾಡಿಕೊಟ್ಟಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಅಂಕ ಪಡೆದ ಚಾರುಕೀರ್ತಿ ಅವರನ್ನು ಸನ್ಮಾನಿಸಿ ಪ್ರೋತ್ಸಾಹ ಧನದ ಚೆಕ್ ವಿತರಿಸಲಾಯಿತು. ವಿಧಾನ ಪರಿಷತ್ತಿನ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ಶಿವಕುಮಾರ್, ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಎಂ.ಶಿವಣ್ಣ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಮೈಲ್ಯಾಕ್ ಅಧ್ಯಕ್ಷ ರಘು ಆರ್.ಕೌಟಿಲ್ಯ, ಉಪ ಮೇಯರ್ ಡಾ.ಜಿ.ರೂಪಾ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಂ. ಪ್ರೇಮ್ ಕುಮಾರ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಯೋಜನಾ ಸಮನ್ವಯಾಧಿಕಾರಿ ಬಿ.ಎಸ್.ಪ್ರಭಾ ಅರಸ್, ನಗರಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತ್‌ರೆಡ್ಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ ಇತರರು ಇದ್ದರು.