

ಚಾಮರಾಜನಗರ: ರಾಮಾಯಣ ಎಂಬ ಮಹಾನ್ ಕಾವ್ಯವನ್ನು ಜಗತ್ತಿಗೆ ಕೊಟ್ಟಂತಹ ಮಹರ್ಷಿ ವಾಲ್ಮೀಕಿಯವರ ಆದರ್ಶ, ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮರಾಗೋಣ ಎಂದು ಸಂಸದ ಸುನೀಲ್‌ಬೋಸ್ ಹೇಳಿದರು.
ನಗರದ ಸರ್ಕಾರಿ ಪೇಟೆ ಪ್ರೈಮರಿ ಶಾಲೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರೀಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಯುವಕರು ಹೆಚ್ಚು ಅಧ್ಯಯನ ಮಾಡಿ ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕು. ರಾಮಾಯಣವನ್ನು ಓದಬೇಕಿದೆ. ಮಹರ್ಷಿ ವಾಲ್ಮೀಕಿ ಅವರು ಅಪಾರವಾದ ಜ್ಞಾನವನ್ನು ಪಡೆದು ರಾಮಾಯಣದಂತಹ ಮಹಾನ್ ಕಾವ್ಯವನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಅವರ ಹಾದಿಯಲ್ಲಿ ನಾವೆಲ್ಲರೂ ಸಾಗೋಣ ಎಂದು ಸಲಹೆ ನೀಡಿದರು.
ಶಿವಮೊಗ್ಗ ಕನ್ನಡ ಭಾರತಿ ಕುವೆಂಪು ವಿಶ್ವವಿದ್ಯಾನಿಲಯದ ಹಿರಿಯ ಪ್ರಾಧ್ಯಾಪಕ ಡಾ.ಜಿ.ಪ್ರಶಾಂತ ನಾಯಕ ಮಾತನಾಡಿ, ವಾಲ್ಮೀಕಿ ಅವರು ಹುಟ್ಟದಿದ್ದರೇ ರಾಮ ಮತ್ತು ರಾಮಾಯಣ ಇರುತ್ತಿರಲಿಲ್ಲ. ವಾಲ್ಮೀಕಿಯವರ ಪ್ರತಿಮೆ, ಮಂದಿರ ನಮಗೆ ಬೇಕಿಲ್ಲ. ಏಕೆಂದರೆ ವಾಲ್ಮೀಕಿಯವರು ಈ ನೆಲದ ಪ್ರಜ್ಞೆಯನ್ನು ಕಟ್ಟು ಕೊಟ್ಟಿದ್ದಾರೆ. ವಿಶ್ವಮಾನವತೆ ಕಡೆಗೆ ನಾವು ಹೋಗಬೇಕು ಎಂಬ ಕನಸು ನನಸಾಗಬೇಕಿದೆ ಎಂದರು.
ವಾಲ್ಮೀಕಿ ಅವರು ಕಾಡು ನಾಡಿನ ಮಧ್ಯದೊಳಗೆ ಬೇಟೆಗಾರನಾಗಿರುವ ವೃತ್ತಿಯನ್ನು ಇಟ್ಟುಕೊಂಡು ಅದನ್ನೇ ಮೂಲ ಪ್ರಜ್ಞೆಯಾಗಿಸಿಕೊಂಡು ಕಾಡು ನಾಡನ್ನು ರೂಪಿಸಿಕೊಂಡು ಒಂದು ಕಥನವನ್ನು ಬರೆಯುತ್ತಾರೆ. ರಾಮಾಯಣದಲ್ಲಿ ಬರುವ ರಾಮ, ಮಹಾಭಾರತದಲ್ಲಿ ಬರುವ ಪಾಂಡವರು ಪರಿಪೂರ್ಣವಾಗಬೇಕಾದರೆ ಕಾಡು ನಾಡಿನ ಅನುಭವ ಪಡೆದು, ಕಾಡಿನ ಜೀವನವನ್ನು ರೂಪಿಸಿಕೊಂಡು ವಾಪಸ್ಸು ನಾಡಿಗೆ ಹೋದಾಗ ಅವರು ಪರಿಪೂರ್ಣರಾಗುತ್ತಾರೆ. ಇಲ್ಲದಿದ್ದರೆ ಪರಿಪೂರ್ಣತೆ ಸಾಧ್ಯವಿಲ್ಲ ಎಂದರು.
ಅಂಬೇಡ್ಕರ್, ವಾಲ್ಮೀಕಿ, ಭಗೀರಥ, ಕನಕದಾಸರಂತಹ ಮಹಾನ್ ಚೇತನರ ಜಯಂತಿಗಳು ಸಂಭ್ರಮಿಸಿ, ಹಾರ ಹಾಕಿ, ಭಾಷಣ ಮಾಡಿ ಹೋಗುವಂತಹ ಕಾರ್ಯಕ್ರಮಗಳಾಗಬಾರದು. ಇಂತಹ ಮಹಾಮಹಿಮರನ್ನು ನೆನಪುಮಾಡಿಕೊಂಡು ಅವರ ಆದರ್ಶವನ್ನು ಅನುಸರಿಸುತ್ತೇವೆ ಎಂಬುದನ್ನು ಅವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ನಗರದ ಜಿಲ್ಲಾಡಳಿತ ಭವನದ ಮುಂಭಾಗ ನಿರ್ಮಾಣವಾಗಲಿರುವ ವಾಲ್ಮೀಕಿ ಪುಸ್ಥಳಿಗೆ ಹೆಚ್ಚಿನ ಅನುದಾನದ ಅಗತ್ಯವಿದ್ದರೆ ನೀಡಲಾಗುವುದು ಎಂದು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿಧ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಮುದಾಯದವರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು.
ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ನಗರಸಭೆ ಅಧ್ಯಕ್ಷ ಎಸ.ಸುರೇಶ್, ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್, ನಗರಸಭೆ ಸದಸ್ಯೆ ಎಂ.ಕಲಾವತಿ, ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಚ್.ಎಸ್.ಬಿಂದ್ಯಾ ಮತ್ತು ಮುಖಂಡರು ಹಾಜರಿದ್ದರು.
ಸಚಿವರಿಂದ ಮೆರವಣಿಗೆಗೆ ಚಾಲನೆ:
ನಗರದ ಪ್ರವಾಸಿ ಮಂದಿರದಲ್ಲಿ ಶ್ರೀಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆವಿದ್ದ ರಥಕ್ಕೆ ಪಶುಸಂಗೋಪನೆ, ರೇಷ್ಮೆ, ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯು ವಿವಿಧ ಕಲಾ ತಂಡಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಪೇಟೆ ಪ್ರೈಮರಿ ಶಾಲೆಯ ಆವರಣದ ವೇದಿಕೆ ಕಾರ್ಯಕ್ರಮದಲ್ಲಿ ಅಂತ್ಯಗೊಂಡಿತು. ಇದಕ್ಕೂ ಮೊದಲು ವಾಲ್ಮೀಕಿ ಜಯಂತಿ ಪ್ರಯುಕ್ತ ಜಿಲ್ಲಾಡಳಿತ ಭವನದ ಮುಂಭಾಗ ಇರುವ ಡಾ.ಬಿ.ಅರ್.ಅಂಬೇಡ್ಕರ್ ಪುತ್ಥಳಿಗೆ ಸಚಿವ ಕೆ.ವೆಂಕಟೇಶ್ ಮಾಲಾರ್ಪಣೆ ಮಾಡಿದರು. ಗುಂಡ್ಲುಪೇಟೆ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎಚ್.ಎಂ.ಗಣೇಶ್‌ಪ್ರಸಾದ್, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ಮತ್ತು ಸೋಮೇಶ್ ಇತರರಿದ್ದರು.