ವಾಲ್ಮಿಗಳ ಪುನರುಜ್ಜೀವನ ಅಗತ್ಯ

23 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ದೇಶದ ಸಾಮರ್ಥ್ಯವರ್ಧನೆ ಸಂಸ್ಥೆಗಳ ಸ್ಥಾಪನೆ ಹಿಂದೆ ಬಹು ದೊಡ್ಡ ಉದ್ದೇಶವಿತ್ತು. ಜಲ ಮತ್ತು ನೆಲ ನಿರ್ವಹಣೆಗೆ ರಾಷ್ಟ್ರಾದ್ಯಂತ ಸ್ಥಾಪಿಸಿದ 14 ವಾಲ್ಮಿ ಸಂಸ್ಥೆಗಳಲ್ಲಿ ಬಹುತೇಕ ಸಂಸ್ಥೆಗಳು ನಿಷ್ಕ್ರಿಯವಾಗಿವೆ. ವಾಲ್ಮಿ ಸಂಸ್ಥೆಗಳ ಪುನರುಜ್ಜೀವನಗೊಳಿಸುವ ದಿಸೆಯಲ್ಲಿ ಗಮನಹರಿಸುವುದು ಇಂದಿನ ಅಗತ್ಯವಾಗಿದೆ ಎಂದು ಜಲ ಪುರುಷ ಡಾ. ರಾಜೇಂದ್ರ ಸಿಂಗ್ ಅಭಿಪ್ರಾಯಪಟ್ಟರು.
ನಗರದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಅಖಿಲ ಭಾರತ ವಾಲ್ಮಿಗಳ ಸಮ್ಮೇಳನ-2023 ದ್ಘಾಟಿಸಿ ಅವರು ಮಾತನಾಡಿದರು.
ನೀರಿಲ್ಲದೆ ಜೀವವಿಲ್ಲ. ಅದೇ ರೀತಿ ನೆಲದ ನಿರ್ವಹಣೆಯೂ ಮಹತ್ವದ್ದಾಗಿದೆ. ಜಲ, ನೆಲ ನಿರ್ವಹಣೆ ಸಮಾಜದ ಉಳಿವಿಗೆ ಅತ್ಯಗತ್ಯ. ಈ ದಿಸೆಯಲ್ಲಿ ಕೆಲಸ ಮಾಡುತ್ತಿರುವ ವಾಲ್ಮಿಗಳ ಬಲವರ್ಧನೆಗೆ ಕ್ರಮ ಕೈಗೊಳ್ಳಬೇಕಾಗಿದೆ. ದೇಶದಲ್ಲಿ ಸಮುದಾಯ ಆಧಾರಿತ ವಿಕೇಂದ್ರೀಕೃತ ನೀರು ನಿರ್ವಹಣಾ ವ್ಯವಸ್ಥೆ ಅಭಿವೃದ್ಧಿಪಡಿಸಬೇಕಿದೆ ಎಂದರು.
ಹೈದ್ರಾಬಾದ್‌ನ ವಿ. ಪ್ರಕಾಶರಾವ್ ಮಾತನಾಡಿ, ವಾಲ್ಮಿ ಬೆಳವಣಿಗೆಗೆ ಧನ ಸಹಾಯ ಸೇರಿ ಉತ್ತಮ ಸಹಕಾರ ನೀಡುತ್ತಿರುವ ರಾಜ್ಯ ಸರ್ಕಾರದ ಕ್ರಮ ಸ್ವಾಗತಾರ್ಹ ಹಾಗೂ ಇತರ ರಾಜ್ಯಗಳಿಗೆ ಮಾದರಿಯಾಗಿದೆ. ಎಲ್ಲ ರಾಜ್ಯ ಸರ್ಕಾರಗಳು ಸೂಕ್ತ ಕ್ರಮ ಕೈಗೊಂಡಲ್ಲಿ ಜಲ ಮತ್ತು ನೆಲ ನಿರ್ವಹಣೆಯಲ್ಲಿ ಮಹತ್ತರ ಹೆಜ್ಜೆ ಇರಿಸಿದಂತಾಗುತ್ತದೆ. ಸರ್ಕಾರಗಳು ಕಾಡಾ ಮತ್ತು ಇತರ ಸಂಸ್ಥೆಗಳಿಗೆ ನೀಡುತ್ತಿರುವಂತೆಯೇ ವಾಲ್ಮಿ ಮತ್ತು ಅದರಂಥ ಇತರ ಸಂಸ್ಥೆಗಳಿಗೂ ಸೂಕ್ತ ಅನುದಾನ ನೀಡಿ ಅಭಿವೃದ್ಧಿ ಪಡಿಸಬೇಕಿದೆ. ನೀರಾವರಿ ವ್ಯವಸ್ಥೆ ಬಲಪಡಿಸಿ ಕಾಲುವೆಯ ಕೊನೆ ಅಂಚಿನ ರೈತರಿಗೂ ನೀರಾವರಿ ಸೌಲಭ್ಯ ದೊರಕಿಸಿಕೊಡಲು ಕ್ರಮ ಕೈಗೊಂಡಲ್ಲಿ ರೈತರು ನೀರಿನ ಲಭ್ಯತೆಗೆ ಅನುಗುಣವಾಗಿ ಬೆಳೆಗಳನ್ನು ಬೆಳೆಯಲು ಸಹಕಾರಿಯಾಗುತ್ತದೆ ಎಂದರು.
ಪುಣೆಯ ನ್ಯಾಷನಲ್ ವಾಟರ್ ಅಕಾಡೆಮಿ ನಿರ್ದೇಶಕ ಮಿಲಿಂದ ಪಾನಪಾಟೀಲ ಮಾತನಾಡಿ, ಜಲ ಮತ್ತು ನೆಲ ನಿರ್ವಹಣೆಗೆ ಸಂಬಂಧಿಸಿ ಕೆಲಸ ಮಾಡುತ್ತಿರುವ ವಾಲ್ಮಿಯಂಥ ಸಂಸ್ಥೆಗಳನ್ನು ಬಲಪಡಿಸುವ ಅಗತ್ಯವಿದೆ ಎಂದರು.
ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ ಡಾ. ಎಸ್.ಎಂ. ಶಿವಪ್ರಸಾದ ಮಾತನಾಡಿ, ಜೀವ ಕೊಟ್ಟ ಪ್ರಕೃತಿಯನ್ನು ಸೂಕ್ತ ಶಿಕ್ಷಣದ ಮೂಲಕ ರಕ್ಷಿಸುವುದು ನಮ್ಮೆಲ್ಲರ ಹೊಣೆ. ಮಾನವನ ಅಗತ್ಯಗಳನ್ನು ಪೂರೈಸಲು ಪ್ರಕೃತಿಯಲ್ಲಿ ವ್ಯವಸ್ಥೆ ಇದೆ. ಆದರೆ ಮನುಷ್ಯರ ಅತಿ ಆಸೆ ಪೂರೈಸುವುದು ಅಸಾಧ್ಯ. ಈ ಅಂಶ ಗಮನದಲ್ಲಿಟ್ಟುಕೊಂಡು ಪ್ರಕೃತಿಯ ಶೋಷಣೆ ನಿಲ್ಲಿಸಬೇಕಾದುದು ನಮ್ಮೆಲ್ಲರ ಕರ್ತವ್ಯ ಎಂದರು.
ಧಾರವಾಡ ವಾಲ್ಮಿ ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ ಮಾತನಾಡಿ, ದೇಶದ 14 ವಾಲ್ಮಿಗಳ ಸ್ಥಿತಿಗತಿ ಕುರಿತ ವಿಚಾರ ಸಂಕಿರಣದ ಕೊನೆಯಲ್ಲಿ ಈಗಿರುವ ವಾಲ್ಮಿಗಳ ಚಟುವಟಿಕೆಗಳನ್ನು ಇನ್ನಷ್ಟು ಚುರುಕುಗೊಳಿಸಿ ಅವುಗಳಿಗೆ ಶಕ್ತಿ ತುಂಬುವ ದಿಸೆಯಲ್ಲಿ ಕೇಂದ್ರ ಸರ್ಕಾರಕ್ಕೆ ಧಾರವಾಡ ಘೋಷಣೆ ಎಂಬ ಹೆಸರಿನಲ್ಲಿ ರಚನಾತ್ಮಕ ಸಲಹೆ ನೀಡುವ ಉದ್ದೇಶವಿದೆ ಎಂದರು.
ದೇಶದ ಹದಿನಾಲ್ಕು ವಾಲ್ಮಿಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಹಿರಿಯ ಅಧಿಕಾರಿಗಳು, ದೇಶ, ವಿದೇಶದ ತರಬೇತಿ ತಜ್ಞರು ಹಾಗೂ ರೈತರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ದೇಶದ ವಾಲ್ಮಿಗಳ ಸ್ಥಿತಿ ಗತಿ ಕುರಿತಾದ ಪುಸ್ತಿಕೆ ಬಿಡುಗಡೆ ಮಾಡಲಾಯಿತು.
ಡಾ. ಬಿ.ವೈ. ಬಂಡಿವಡ್ಡರ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net