

ಬಂಕಾಪುರ: ಒಂದು ಕಾಲದಲ್ಲಿ ಕಲೆ, ಸಾಹಿತ್ಯ, ಸಂಗೀತಕ್ಕೆ ಹೆಸರುವಾಸಿಯಾಗಿದ್ದ ಬಂಕಾಪುರ ಪಟ್ಟಣ ಈಗ ಅಧುನಿಕತೆಯ ಭರದಲ್ಲಿ ಕೇವಲ ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿದೆ ಎಂದು ನಿವೃತ್ತ ಮುಖ್ಯಾಧ್ಯಾಪಕ ಸಾಹಿತಿ ಎ.ಕೆ. ಆದವಾನಿಮಠ ಹೇಳಿದರು.
ಪಟ್ಟಣದ ವಿಠ್ಠಲ ರುಕ್ಮಾಯಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಗಾನಯೋಗಿ ಪಂ.ಪುಟ್ಟರಾಜ ಸಂಗೀತ ವಿದ್ಯಾಲಯದ ದ್ವಿತೀಯ ವಾರ್ಷಿಕ ಸಂಗೀತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಧುನಿಕತೆಯ ಮಧ್ಯೆ ಸಂಗೀತ ಪ್ರೇಮಿ ಹಣಮಂತಪ್ಪ ಯು.ವಿ. ಅವರು ಪುಟ್ಟರಾಜ ಗವಾಯಿಗಳ ಹೆಸರಿನಲ್ಲಿ ಸಂಗೀತ ಪಾಠಶಾಲೆ ತೆರೆದು ಈ ಹಿಂದಿನ ಕಲೆಗಳ ಮರು ಸ್ಥಾಪನೆಗೆ ಶ್ರಮಿಸುತ್ತಿದ್ದಾರೆ ಎಂದರು.
ಶಿಕ್ಷಕ ಎಂ.ಎಚ್. ಮೊಮೀನ್ ಮಾತನಾಡಿ, ಮಕ್ಕಳ ಸಣ್ಣ ವಯಸ್ಸಿನಲ್ಲಿಯೇ ನಾವು ಅವರಿಗೆ ಎಲ್ಲ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಕೊಡುವ ಪ್ರಯತ್ನ ಮಾಡಬೇಕಾಗಿದೆ. ಅಂತಹ ಅವಕಾಶವನ್ನು ಬಂಕಾಪುರದ ಗಾನಯೋಗಿ ಪಂ. ಪುಟ್ಟರಾಜ ಸಂಗೀತ ಪಾಠ ಶಾಲೆ ಒದಗಿಸಿ ಕೊಟ್ಟಿದೆ. ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಗೀತ ಶಾಲೆಯ ಸಂಸ್ಥಾಪಕ ಹಣಮಂತ ಯು.ವಿ., ದೂರದರ್ಶನಗಳಲ್ಲಿ ಪ್ರಸಾರಗೊಳ್ಳುವ ಮಕ್ಕಳ ಸಂಗೀತ ಕಾರ್ಯಕ್ರಮಗಳನ್ನು ನೋಡಿ ಹರ್ಷಗೊಳ್ಳುವ ಜೊತೆಗೆ, ನಿಮ್ಮ ಮಕ್ಕಳಿಗೂ ಸಂಗೀತ ಅಭ್ಯಾಸ ಮಾಡಿಸಿ. ಅವರು ಸಂಗೀತ ಕಾರ್ಯಕ್ರಮಗಳಲ್ಲಿ ಹಾಡುವುದನ್ನು ನೋಡಿ ಹರ್ಷಗೊಳ್ಳಿರಿ ಎಂದರು.
ನಂತರ ಸಂಗೀತ ಶಿಕ್ಷಕಿ ಭಾಗ್ಯವತಿ ಕೊಡಬಾಳ, ಕಲಾವಿದ ಶಿವಯ್ಯ ಇಟಗಿಮಠ ಹಾಗೂ ಪಂ.ಪು. ಸಂಗೀತ ಪಾಠಶಾಲೆಯ ಮಕ್ಕಳಿಂದ ಸಂಗೀತೋತ್ಸವ ಕಾರ್ಯಕ್ರಮ ಜರುಗಿತು
ಪುರಸಭೆ ಮಾಜಿ ಸದಸ್ಯರಾದ ಹೊನ್ನಪ್ಪ ಹೂಗಾರ, ಇಸ್ಮಾಯಿಲ್ ದೊಡಮನಿ ಸಂಗೀತ ಪಾಠಶಾಲೆಯ ಸದಸ್ಯರಾದ ಬಸಯ್ಯ ಈಳಿಗೇರ, ರೇಖಾ ವಡ್ಡರ, ಮಂಜುನಾಥ ಮುಳಕೇರಿ, ಮಂಜುಳಾ ತಳ್ಳಳ್ಳಿ, ಸಂಗೀತ ಪಾಠಶಾಲೆಯ ಮಕ್ಕಳು, ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.