

ಬೆಂಗಳೂರು : ಬಿಬಿಎಂಪಿ 198 ವಾರ್ಡ್‌ಗಳಲ್ಲಿ ನೋಡಲ್ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಗಳಲ್ಲಿ ಸಾರ್ವಜನಿಕರು ವಿದ್ಯುತ್ ದೀಪ, ರಸ್ತೆ ಗುಂಡಿಗಳು, ಪಾದಾಚಾರಿ ಮಾರ್ಗ ಒತ್ತುವರಿ, ಬ್ಲಾಕ್ ಸ್ಪಾಟ್ ತೆರವು ಸೇರಿ ಸಸಮಸ್ಯೆಗಳ ಸುರಿಮಳೆಗೈದರು.
ನಗರದಲ್ಲಿ 1.20 ಕೋಟಿಗೂ ಅಧಿಕ ಜನಸಂಖ್ಯೆಯಿದ್ದು, ಮೂಲಸೌಕರ್ಯ, ಅಭಿವೃದ್ಧಿ, ಕರೊನಾ ಸೋಂಕು ಹಾಗೂ ಮಳೆ ಪ್ರವಾಹ ಕುರಿತಂತೆ ಯಾವುದೇ ಸಮಸ್ಯೆ ಹೇಳಿಕೊಳ್ಳಲು ಸ್ಥಳೀಯ ಕಾರ್ಪೋರೇಟರ್ ಇಲ್ಲವಾಗಿದ್ದಾರೆ. ಅವರ ಅಧಿಕಾರಾವಧಿ ಸೆ.10ಕ್ಕೆ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಇವರು ವಾರಕ್ಕೆ 3 ಬಾರಿ ವಾರ್ಡ್ ಪರಿವೀಕ್ಷಣೆ ಹಾಗೂ ತಿಂಗಳ ಮೊದಲ ಮತ್ತು 3ನೇ ಶನಿವಾರ ವಾರ್ಡ್ ಮಟ್ಟದ ಸಮಿತಿ ಸಭೆ ನಡೆಸಬೇಕು. ಈ ನಿಯಮದನ್ವಯ ತಿಂಗಳ ಮೊದಲ ಶನಿವಾರ ಎಲ್ಲ ವಾರ್ಡ್‌ಗಳಲ್ಲಿ ಸಭೆ ನಡೆಸಲಾಯಿತು.
ಹಲಸೂರಿನಲ್ಲಿ ಸಮಸ್ಯೆಗಳ ಸುರಿಮಳೆ: ಜಂಟಿ ಆಯುಕ್ತ ಸರ್ರಾಜ್ ಖಾನ್ ನೋಡಲ್ ಅಧಿಕಾರಿಯಾಗಿರುವ ಹಲಸೂರು ವಾರ್ಡ್‌ನಲ್ಲಿ ರಸ್ತೆ ದುರಸ್ತಿ, ರಸ್ತೆಗುಂಡಿ, ಕಟ್ಟಡ ತ್ಯಾಜ್ಯ ತೆರವು, ಪಾದಚಾರಿ ಮಾರ್ಗ ಒತ್ತುವರಿ ಹಾಗೂ ಬ್ಲ್ಯಾಕ್‌ಸ್ಪಾಟ್ ತೆರವು ಮಾಡುವಂತೆ ಸ್ಥಳೀಯರು ಮನವಿ ಮಾಡಿದರು. ವಿದ್ಯುತ್ ದೀಪ, ಶೌಚಗೃಹಗಳ ನಿರ್ಮಾಣ, ಸಿಸಿ ಕ್ಯಾಮರಾ ಅಳವಡಿಕೆ, ರಸ್ತೆಬದಿ ವಾಹನಗಳ ತೆರವು, ಸ್ಯಾನಿಟರಿ ಲೈನ್ ದುರಸ್ತಿ ಇನ್ನಿತರೆ ಸಮಸ್ಯೆಗಳು ತಾಂಡವಾಡುತ್ತಿವೆ. ಇವುಗಳನ್ನು ಶೀಘ್ರ ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಸ್ವಯಂ ಸೇವಕರ ನಿಯೋಜನೆ: ಎಲ್ಲ ವಾರ್ಡ್‌ಗಳಲ್ಲಿ ಸಮಸ್ಯೆಗಳ ಅರಿವು ಮತ್ತು ಅವುಗಳ ಪರಿಹಾರಕ್ಕೆ ನೆರವಿಗಾಗಿ ಬೂತ್ ಮಟ್ಟದಲ್ಲಿ ಒಬ್ಬರಂತೆ ಸ್ವಯಂಸೇವಕರನ್ನು ನಿಯೋಜಿಸಿ. ಸ್ಥಳೀಯ ಸಂಘಟನೆಗಳು ಮತ್ತು ಸ್ವಯಂಸೇವಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದುಕೊಂಡು ಸಮಸ್ಯೆ ಪರಿಹರಿಸಬೇಕು. ಸ್ಥಳೀಯ ಉದ್ಯಾನ, ಕೆರೆಗಳು ಮತ್ತು ಇತರೆ ಪ್ರೇಕ್ಷಣೀಯ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಂಡು ಸಂರಕ್ಷಣೆ ಮಾಡಬೇಕು. ಎಲ್ಲ ಸಮಸ್ಯೆಗಳಿಗೆ ಸಮರ್ಪಕ ಯೋಜನೆ (ಮೈಕ್ರೋ ಪ್ಲಾನ್) ರೂಪಿಸಿ ನಿಗದಿತ ಅವಧಿಯಲ್ಲಿ ಸಮಸ್ಯೆ ಬಗೆಹರಿಸಬೇಕು ಎಂದು ಹಲಸೂರು ವಾರ್ಡ್ ಸಭೆ ಪರಿಶೀಲನೆಗೆ ತೆರಳಿದ್ದ ಪಾಲಿಕೆ ಆಡಳಿತಾಧಿಕಾರಿ ಗೌರವ್ ಗುಪ್ತ ಅಧಿಕಾರಿಗಳಿಗೆ ಸಲಹೆ ನೀಡಿದರು.
ಸಾರ್ವಜನಿಕರ ಮಿಶ್ರ ಪ್ರತಿಕ್ರಿಯೆ: ಪ್ರಥಮ ದರ್ಜೆ ಸಹಾಯಕ ಹುದ್ದೆಗಿಂತ ಮೇಲ್ದರ್ಜೆ ಹುದ್ದೆ ಹೊಂದಿದ ಇಂಜಿನಿಯರ್, ಆರೋಗ್ಯಾಧಿಕಾರಿಗಳು, ಜಂಟಿ ಆಯುಕ್ತರು, ವಿಶೇಷ ಆಯುಕ್ತರು ಹಾಗೂ ಆಯುಕ್ತರು ವಾರ್ಡ್‌ಗಳಿಗೆ ನೋಡಲ್ ಅಧಿಕಾರಿಗಳಾಗಿದ್ದಾರೆ. ಇದರಲ್ಲಿ ಆಯುಕ್ತರು, ವಿಶೇಷ ಮತ್ತು ಜಂಟಿ ಆಯುಕ್ತರು ಹಾಗೂ ಮುಖ್ಯ ಇಂಜಿನಿಯರ್‌ಗಳು ನೋಡಲ್ ಅಧಿಕಾರಿಗಳಾಗಿರುವ ವಾರ್ಡ್‌ನಲ್ಲಿ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಆದರೆ, ಬಹುತೇಕ ವಾರ್ಡ್‌ಗಳಲ್ಲಿ ಬೆಸ್ಕಾಂ, ಜಲಮಂಡಳಿ, ಮೆಟ್ರೋ ಅಧಿಕಾರಿಗಳನ್ನು ಹೊರತುಪಡಿಸಿ ಸಾರ್ವಜನಿಕರ ಹಾಜರಾತಿ ಕೊರತೆ ಕಂಡುಬಂದಿತು.
ವಸಂತನಗರ ವಾರ್ಡ್‌ನಲ್ಲಿ ಸಭೆ : ಪಾಲಿಕೆ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ನೋಡಲ್ ಅಧಿಕಾರಿಯಾಗಿರುವ ವಸಂತ ನಗರದಲ್ಲಿ ವಾರ್ಡ್ ಸಮಿತಿ ಸಮಿತಿ ಸಭೆ ವೇಳೆ ಸಾರ್ವಜನಿಕರು ವಿದ್ಯುತ್ ದೀಪ ಅಳವಡಿಕೆ, ಕಸ ವಿಲೇವಾರಿ, ಬ್ಲ್ಯಾಕ್‌ಸ್ಪಾಟ್ ತೆರವು, ಪಾದಚಾರಿ ಮಾರ್ಗ ಒತ್ತುವರಿ ತೆರವು ಮತ್ತು ದುರಸ್ತಿ ಮಾಡುವಂತೆ ಸಾರ್ವಜನಿಕರು ಸಮಸ್ಯೆ ಹೇಳಿಕೊಂಡರು. ಜತೆಗೆ, ನಿವಾಸಿ ಸಂಘಟನೆಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಾಯಿತು. ಮೊದಲ ಸಭೆಯಲ್ಲಿ ಸಾರ್ವಜನಿಕರು ಸಮಸ್ಯೆ ಹೇಳಿದ್ದು, ಸಂಬಂಧಿಸಿದ ಅಧಿಕಾರಿಗಳೊಂದಿಗೆ ಕೂಡಲೇ ಚರ್ಚಿಸಿ ಪರಿಹಾರ ಕೈಗೊಳ್ಳಲು ಸೂಚಿಸಲಾಯಿತು ಎಂದು ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಸಮನ್ವಯ ಕೊರತೆಗೆ ಅಸಮಾಧಾನ : ಬಿಬಿಎಂಪಿಯ ಎಲ್ಲ ವಾರ್ಡ್‌ಗಳು 40ರಿಂದ 50 ಸಾವಿರ ಜನಸಂಖ್ಯೆಯುಳ್ಳ ಸಣ್ಣ ನಗರಗಳಾಗಿ ಪರಿವರ್ತನೆಯಾಗಿದೆ. ಅಧಿಕಾರಿಗಳು ಸ್ಥಳೀಯರು ಹಾಗೂ ನಿವಾಸಿ ಸಂಘಗಳೊಂದಿಗೆ ಕೈಜೋಡಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಕಾನೂನು ತೊಡಕಿರುವ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳಬೇಕು. ಆದರೆ, ಬೆಸ್ಕಾಂ, ಜಲಮಂಡಳಿ, ಪೊಲೀಸ್ ಠಾಣೆ ಹಾಗೂ ಬಿಬಿಎಂಪಿ ಅಧಿಕಾರಿಗಳ ನಡುವೆ ಸಮನ್ವಯ ಕೊರತೆ ಹೆಚ್ಚಾಗಿದೆ. ಇದನ್ನು ಬಗೆಹರಿಸಿಕೊಂಡು ಮೂಲಸೌಕರ್ಯ ಸೇರಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ ತಿಳಿಸಿದ್ದಾರೆ.