

ಕಲಬುರಗಿ: ಸಿಎಎ, ಎನ್ಆರ್ಸಿ ವಿರುದ್ಧ ನಗರದಲ್ಲಿ ಇತ್ತೀಚೆಗೆ ನಡೆದಿದ್ದ ಸಮಾವೇಶದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಮೇರೆಗೆ ಎಐಂಐಎಂ ಪಕ್ಷದ ಮಾಜಿ ಶಾಸಕ ವಾರಿಸ್ ಯುಸೂಫ್ ಪಠಾಣ್ ವಿರುದ್ಧ ಕೇಸ್ ದಾಖಲಿಸಿದ್ದು, ಶೀಘ್ರದಲ್ಲೇ ಬಂಧಿಸುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಾಗರಗಾ ಕ್ರಾಸ್ ಬಳಿಯ ಪೀರ್ ಬಂಗಾಲಿ ಮೈದಾನದಲ್ಲಿ 15ರಂದು ರಾತ್ರಿ ಸಿಎಎ, ಎನ್ಆರ್ಸಿ ಮತ್ತು ಎನ್ಪಿಆರ್ ವಿರೋಧಿಸಿ ಎಐಎಂಐಎಂ ಆಯೋಜಿಸಿದ್ದ ವಿಭಾಗ ಪ್ರತಿಭಟನಾ ರ್ಯಾಲಿಯಲ್ಲಿ ಮಾತನಾಡಿದ ಪಠಾಣ್, ಈಗ ಕೇವಲ ನಮ್ಮ ಹೆಣ್ಮಕ್ಕಳು (ಸಿಂಹಿಣಿಯರು) ಬೀದಿಗಿಳಿದಿದ್ದಕ್ಕೆ ಎಲ್ಲರೂ ಬೆವರಿದ್ದಾರೆ. ಇನ್ನು 15 ಕೋಟಿ ಜನಸಂಖ್ಯೆಯ ನಾವೂ ಸೇರಿದರೆ 100 ಕೋಟಿ ಜನರಿಗೆ ಭಾರಿ ಬೀಳಲಿದ್ದೇವೆ (ಭಾರಿ ಪಡೆಗಾ) ಎನ್ನುವ ಮೂಲಕ ಪರೋಕ್ಷವಾಗಿ ಹಿಂದುಗಳಿಗೆ ಬೆದರಿಕೆ ಹಾಕಿದ್ದರು. ಈ ಬಗ್ಗೆ ನ್ಯಾಯವಾದಿ ಶ್ವೇತಾಸಿಂಗ್ ರಾಠೋಡ್ ನೀಡಿದ ದೂರಿನನ್ವಯ ಪಠಾಣ್ ವಿರುದ್ಧ ಐಪಿಸಿ ಸೆಕ್ಷನ್ 117, 153 ಮತ್ತು 153(ಎ) ಅಡಿ ಕಲಬುರಗಿ ಗ್ರಾಮೀಣ ಠಾಣೆಯಲ್ಲಿ ಶುಕ್ರವಾರ ತಡರಾತ್ರಿ ಇನ್ಸ್ಪೆಕ್ಟರ್ ಸೋಮಲಿಂಗ ಕಿರದಳ್ಳಿ ಎಫ್ಐಆರ್ ದಾಖಲಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಬೊಮ್ಮಾಯಿ, ಪ್ರಕರಣವನ್ನು ಗಂಭೀರ ಪರಿಗಣಿಸದ ಪೊಲೀಸ್ ಆಯುಕ್ತರು ಸೇರಿ ಕೆಲ ಹಿರಿಯ ಅಧಿಕಾರಿಗಳಿಂದ ವರದಿ ಪಡೆಯಲಾಗುವುದು. ತಪ್ಪು ಕಂಡಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇದೇ ರ್ಯಾಲಿಯಲ್ಲಿ ಎಂಐಎಂ ರಾಷ್ಟ್ರೀಯ ಅಧ್ಯಕ್ಷ ಸಂಸದ ಅಸಾದುದ್ದೀನ್ ಓವೈಸಿ, ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಷಾ ವಿರುದ್ಧ ಮಾತನಾಡಿದ್ದೇನೆ. ತಾಕತ್ತಿದ್ದರೆ ನನ್ನ ವಿರುದ್ಧ ಕೇಸ್ ಹಾಕಿ ಎಂದಿದ್ದರು. ಆದರೆ ಅವರ ವಿರುದ್ಧ ಕೇಸ್ ದಾಖಲಾಗಿಲ್ಲ. ಪಠಾಣ್ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು, ಅವರು ಮಾತನಾಡಿದ ವಿಡಿಯೋ ಕ್ಲಿಪ್ ಇತರ ಸಾಕ್ಷಿಗಳನ್ನು ಸಂಗ್ರಹಿಸುತ್ತಿದ್ದಾರೆ.
ನ್ಯಾಯವಾದಿಗಳ ಮಧ್ಯೆ ಕಾನೂನು ಹಗ್ಗಜಗ್ಗಾಟ
ವಾರಿಸ್ ಪಠಾಣ್ ಮೂಲತಃ ನ್ಯಾಯವಾದಿ. ಅವರ ವಿರುದ್ಧ ಕಲಬುರಗಿ ನ್ಯಾಯವಾದಿ ಶ್ವೇತಾಸಿಂಗ್ ದೂರು ನೀಡಿದ್ದರಿಂದ ವಕೀಲರ ಮಧ್ಯೆ ಕಾನೂನಿನ ಹಗ್ಗಜಗ್ಗಾಟ ಶುರುವಾಗಿದೆ. ಮುಂಬಯಿನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧ ದಾಖಲಾಗಿದ್ದ ಹಿಟ್ ಆ್ಯಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಖಾನ್ ಪರ ಪಠಾಣ್ ವಾದ ಮಂಡಿಸಿದ್ದರು. ಅಷ್ಟೇ ಅಲ್ಲ, 1993ರಲ್ಲಿ ನಡೆದ ಮುಂಬಯಿ ಬಾಂಬ್ ಬ್ಲಾಸ್ಟ್ ಪ್ರಕರಣದ ಆರೋಪಿಯೊಬ್ಬನ ಪರವಾಗಿಯೂ ವಾದ ಮಂಡಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಮಹಾರಾಷ್ಟ್ರದ ಮಾಜಿ ಶಾಸಕ ಎಂಐಎಂ ಮುಖಂಡ ಮುಂಬಯಿವಾರಿಸ್ ಪಠಾಣ್ ವಿರುದ್ಧ ಕೇಸ್ ದಾಖಲಿಸಿದ್ದು, ತನಿಖೆ ನಡೆಸಲಾಗುತ್ತಿದೆ. ಅಗತ್ಯಬಿದ್ದಲ್ಲಿ ವಿಚಾರಣೆ ನಡೆಸಲಾಗುವುದು.
| ಎಂ.ಎನ್.ನಾಗರಾಜ್ ನಗರ ಪೊಲೀಸ್ ಆಯುಕ್ತ
ಸಾತ್ವಿಕ ಕೋಪ ವ್ಯಕ್ತಪಡಿಸಿದ್ದೇನೆ
ನಾನು ಯಾವುದೇ ಜಾತಿ, ಜನಾಂಗ ಅಥವಾ ಧರ್ಮದವರ ಭಾವನೆಗಳಿಗೆ ನೋವುಂಟು ಮಾಡುವಂತೆ ಪ್ರಚೋಚನಾಕಾರಿ ಭಾಷಣ ಮಾಡಿಲ್ಲ. ಬದಲಿಗೆ ಭಾರತೀಯನಾದ ನಾನು ಎಲ್ಲರಂತೆ ಸಾತ್ವಿಕ ಕೋಪ ವ್ಯಕ್ತಪಡಿಸಿದ್ದೇನೆ ಅಷ್ಟೆ ಎಂದು ಎಐಎಂಐಎಂ ಪಕ್ಷದ ಮಾಜಿ ಶಾಸಕ ವಾರಿಸ್ ಪಠಾಣ್ ಹೇಳಿಕೊಂಡಿದ್ದಾರೆ. ಅವರ ವಿರುದ್ಧ ಕೇಸ್ ದಾಖಲಾಗಿದೆ ಎಂಬ ಮಾಹಿತಿ ಅರಿಯುತ್ತಲೇ, ಜಾತಿ, ಮತ ಮತ್ತು ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸುವಂಥ ಕೆಲಸಕ್ಕೆ ನಾನು ಅಥವಾ ನನ್ನ ಪಕ್ಷ ಬೆಂಬಲಿಸುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ನಾನು ಭಾರತೀಯ ಎಂಬುದಕ್ಕೆ ಹೆಮ್ಮೆ ಪಡುತ್ತೇನೆ. ಬಹುತ್ವವನ್ನು ಗೌರವಿಸುತ್ತೇನೆ. ಸಂವಿಧಾನದ ಮೇಲೆ ವಿಶ್ವಾಸವಿಟ್ಟು ಭಾರತೀಯರಂತೆ ನಾನೂ ಸಾತ್ವಿಕ ಕೋಪ ತೋರಿದ್ದೇನೆ. ಸಿಎಎ, ಎನ್ಆರ್ಸಿ ಮತ್ತು ಎನ್ಪಿಎಗೆ ಸಂಬಂಧಿಸಿದ ಸಮಸ್ಯೆ ನಿವಾರಿಸುವಲ್ಲಿ ಕೇಂದ್ರ ಸಕರ್ಾರ ನಿರ್ಲಕ್ಷ್ಯ ತೋರುತ್ತಿದೆ. ಇದನ್ನು ಖಂಡಿಸಿ ಪ್ರಜಾಪ್ರಭುತ್ವದ ತಳಹದಿಯಲ್ಲೇ ನಾವು ಪ್ರತಿಭಟನೆ ಮಾಡುತ್ತಿದ್ದೇವೆ ಎಂದಿದ್ದಾರೆ.