ವಾರದೊಳಗೆ ಅರ್ಜಿ ವಿಲೇವಾರಿ ಮಾಡದಿದ್ದರೆ ಕ್ರಮ

4ark1
Published on

ಅರಕಲಗೂಡು: ಕಂದಾಯ ಇಲಾಖೆಯಲ್ಲಿ ಬಾಕಿ ಉಳಿದಿರುವ ಅರ್ಜಿಗಳನ್ನು ಒಂದು ವಾರದಲ್ಲಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳದಿದ್ದರೆ ಸಂಬಂಧಿಸಿದ ನೌಕರರನ್ನು ಹೊಣೆಗಾರರನ್ನಾಗಿಸಿ ಕ್ರಮ ಕೈಗೊಳ್ಳುವುದಾಗಿ ಶಾಸಕ ಎ. ಮಂಜು ಎಚ್ಚರಿಕೆ ನೀಡಿದರು.


ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ವಿವಿಧ ಇಲಾಖೆ ನೌಕರರ ಸಭೆ ನಡೆಸಿ ಮಾತನಾಡಿದ ಅವರು, ಕಚೇರಿ ಕೆಲಸಕ್ಕೆ ಬರುವ ಜನರನ್ನು ಅಲೆಸುತ್ತಿರುವುದಲ್ಲದೆ, ಹಣಕ್ಕಾಗಿ ಪೀಡಿಸುತ್ತಿರುವ ಕುರಿತು ಜನರಿಂದ ವ್ಯಾಪಕ ದೂರುಗಳು ಬಂದಿವೆ. ತಕರಾರು ಇದೆ ಎಂಬ ನೆಪವೊಡ್ಡಿ ಎರಡು ಮೂರು ವರ್ಷಗಳಿಂದ ಕಡತ ವಿಲೇವಾರಿ ಮಾಡದಿರುವ ಪ್ರಕರಣಗಳಿವೆ. ಉಳಿದಿರುವ ಕಡತಗಳೆಷ್ಟು, ಏತಕ್ಕಾಗಿ ವಿಲೇವಾರಿ ಮಾಡದೆ ಹಾಗೇ ಉಳಿದಿದೆ ಎಂಬ ಕುರಿತು ವಿವರವಾದ ವರದಿಯನ್ನು ನೀಡಬೇಕು ಎಂದು ತಾಕೀತು ಮಾಡಿದರು.


ಬಗರ್‌ಹುಕುಂ ಯೋಜನೆಯ ಫಲಾನುಭವಿಗಳಿಗೆ ಸಾಗುವಳಿ ಚೀಟಿ ವಿತರಿಸಿದ್ದು, ಖಾತೆ ಮಾಡಿಸಿಕೊಳ್ಳಲು ಕಚೇರಿಗೆ ಬಂದರೆ ಹಣ ಕೊಡದಿದ್ದರೆ ಮಾಡುವುದಿಲ್ಲ ಎಂದು ಹೇಳುತ್ತಿರುವ ಕುರಿತು ಕೇಸ್‌ವರ್ಕರನ್ನು ತರಾಟೆಗೆ ತೆಗೆದುಕೊಂಡ ಅವರು ಕೂಡಲೇ ಆತನ ಸ್ಥಳ ಬದಲಾಯಿಸುವಂತೆ ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ್ ಅವರಿಗೆ ಸೂಚಿಸಿದರು. ನೌಕರರು ತಮ್ಮ ವರ್ತನೆಯನ್ನು ತಿದ್ದಿಕೊಂಡು ಜನರನ್ನು ಗೋಳಾಡಿಸದೆ ಕರ್ತವ್ಯ ನಿರ್ವಹಿಸದಿದ್ದರೆ ಕಠಿಣ ಕ್ರಮಕ್ಕೆ ಮುಂದಾಗಬೇಕಾಗುತ್ತದೆ. ವ್ಯವಸ್ಥೆಯಲ್ಲಿ ಬದಲಾವಣೆ ಬರುವವರೆಗೂ ತಮ್ಮ ಪ್ರಯತ್ನ ಕೈಬಿಡುವುದಿಲ್ಲ ಎಂದರು.


ಸರ್ವೇ ಇಲಾಖೆ ನೌಕರರ ಸಭೆ ನಡೆಸಿ, ರೈತರ ಜಮೀನು ಅಳತೆಗೆ 5ರಿಂದ 10 ಸಾವಿರ ರೂ. ಕೇಳುತ್ತಿರುವ ಕುರಿತು ದೂರುಗಳು ಬಂದಿವೆ. ನೌಕರರು ಇನ್ನು ಮುಂದೆ ತಪ್ಪನ್ನು ತಿದ್ದಿಕೊಂಡು ಬದಲಾಗಬೇಕು. ದೂರುಗಳು ಬಂದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಅನಿವಾರ್ಯ ಎಂದು ಎಚ್ಚರಿಸಿದರು. ಯಾವ ಸರ್ವೇಯರ್‌ಗೆ ಎಷ್ಟು ಪ್ರಕರಣ ವಹಿಸಲಾಗಿದೆ ಹಾಗೂ ಕೈಗೊಂಡಿರುವ ಕ್ರಮಗಳ ಕುರಿತು ವರದಿ ನೀಡುವಂತೆ ಸರ್ವೇ ಅಧಿಕಾರಿ ಕಾಂತರಾಜ್ ಅವರಿಗೆ ಸೂಚಿಸಿದರು. ಬಳಿಕ ಉಪನೋಂದಣಾಧಿಕಾರಿ ಕಚೇರಿ ನೌಕರರ ಸಭೆ ನಡೆಸಿ, ನೋಂದಣಿ ವ್ಯವಹಾರದಲ್ಲಿ ದಂಧೆ ನಡೆಯುತ್ತಿರುವ ದೂರುಗಳಿದ್ದು, ಸರಿಯಾಗಿ ಕಾರ್ಯನಿರ್ವಹಿಸುವಂತೆ ಎಚ್ಚರಿಕೆ ನೀಡಿದರು.


ಮಾಜಿ ಸಚಿವ ದಿ.ಎಚ್.ಎನ್.ನಂಜೇಗೌಡರ ಜಮೀನಿನ ಖಾತೆ ಬದಲಾವಣೆ 6 ವರ್ಷವಾದರೂ ಮಾಡಿಲ್ಲ. ಭಾರಿ ನೀರಾವರಿ ಸಚಿವರಾಗಿದ್ದ ಕುಟುಂಬದವರನ್ನೇ ಅಲೆದಾಡಿಸಿರುವ ನೌಕರರು ಜನಸಾಮಾನ್ಯರನ್ನು ಬಿಟ್ಟಾರೆಯೇ ಎಂದು ಮಂಜು ಆಕ್ರೋಶ ಹೊರಹಾಕಿದರು. ವಿಧಾನಸಭಾ ಚುನಾವಣೆಯಲ್ಲಿ ನಾನು ಗೆಲುವು ಸಾಧಿಸಿದ ಬಳಿಕ ಮೂರೇ ದಿನಗಳಲ್ಲಿ ಖಾತೆ ಬದಲಾವಣೆ ಮಾಡಲಾಗಿದೆ ಎಂದರು.


ಕಂತೇನಹಳ್ಳಿ ಕಾವಲ್ ಸ.ನಂ. 105ರಲ್ಲಿ ಭೂಮಿ ಸರ್ವೇ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿ 7 ವರ್ಷಗಳಾದರೂ ಕ್ರಮ ಕೈಗೊಂಡಿಲ್ಲ. ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ತಾಲೂಕಿನ ದೊಡ್ಡಮಗ್ಗೆ ಹೋಬಳಿ ಕಣಿಯಾರು ಗ್ರಾಮದ ಬಳಿ ಸರ್ವೇ ನಂಬರ್ 86 ರಲ್ಲಿ 10 ಎಕರೆ ಸರ್ಕಾರಿ ಜಮೀನನ್ನು ಕೈಗಾರಿಕಾ ಪ್ರದೇಶ ನಿರ್ಮಾಣಕ್ಕೆ ಮಂಜೂರು ಮಾಡಲಾಗಿದೆ ಎಂದರು. ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ, ತಾಲೂಕು ಕಚೇರಿ ಶಿರಸ್ತೇದಾರ್ ಸಿ. ಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net