

ನರಗುಂದ: ಪ್ರವಾಹಕ್ಕೆ ಕೊಚ್ಚಿ ಹೋಗಿದ್ದ ತಾಲೂಕಿನ ಕೊಣ್ಣೂರು ಸೇತುವೆ ಬಳಿ ಕೈಗೊಂಡಿರುವ ಹುಬ್ಬಳ್ಳಿ-ಸೊಲ್ಲಾಪುರ ರಸ್ತೆ ಕಾಮಗಾರಿಯನ್ನು ಸಂಸದ ಪಿ.ಸಿ. ಗದ್ದಿಗೌಡ್ರ ಶನಿವಾರ ಪರಿಶೀಲಿಸಿದರು.
ಆ.21 ರಂದು ‘ವಿಜಯವಾಣಿ’ಯಲ್ಲಿ ‘ವೈಜ್ಞಾನಿಕ ಸೇತುವೆ ನಿರ್ವಿುಸಲು ಕೊಣ್ಣೂರ ಗ್ರಾಮಸ್ಥರ ಒತ್ತಾಯ’ ಶೀರ್ಷಿಕೆಯಡಿ ಪ್ರಕಟಿಸಿದ್ದ ವಿಸ್ಕೃತ ವರದಿಗೆ ಸ್ಪಂದಿಸಿರುವ ಅವರು, ರಾಷ್ಟ್ರೀಯ ಹೆದ್ದಾರಿ ನಿಗಮದ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದರು. ನಂತರ ಮಾತನಾಡಿ, ಕೊಣ್ಣೂರು ಗ್ರಾಮಸ್ಥರ ಸಲಹೆಯಂತೆ ಸೇತುವೆ ನಿರ್ವಿುಸಲಾಗುವುದು. ಸೇತುವೆ ಮತ್ತು ರಸ್ತೆ ಕಾಮಗಾರಿಗೆ ಬೇಕಾಗಿರುವ ಹೆಚ್ಚುವರಿ 3 ಕೋಟಿ ರೂಪಾಯಿ ಅನುದಾನದ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ರ್ಚಚಿಸುತ್ತೇನೆ. ತಕ್ಷಣವೇ ದೆಹಲಿಗೆ ತೆರಳಿ ಒಂದು ವಾರದೊಳಗೆ ಅನುದಾನ ಬಿಡುಗಡೆಗೊಳಿಸಲಾಗುವುದು ಎಂದು ಹೇಳಿದರು.
ಕೊಣ್ಣೂರಿನ ಹಳೇ ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆ ದುರಸ್ತಿ ಕಾಮಗಾರಿಗೆ 1 ಕೋಟಿ ರೂ. ವಿಶೇಷ ಅನುದಾನ ನೀಡುವಂತೆ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಅವರಲ್ಲಿ ಮನವಿ ಮಾಡಲಾಗಿದೆ. ಸಚಿವರು ಅನುದಾನ ನೀಡಲು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ರಾಷ್ಟ್ರೀಯ ಹೆದ್ದಾರಿ ಹುಬ್ಬಳ್ಳಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಆರ್.ಕೆ. ಮಠದ, ರಾಷ್ಟ್ರೀಯ ಹೆದ್ದಾರಿ ನಿಗಮದ ಎಇಇ ರಾಜೇಂದ್ರ, ಎಪಿಎಂಸಿ ಅಧ್ಯಕ್ಷ ಶಂಕರಗೌಡ ಯಲ್ಲಪ್ಪಗೌಡ್ರ, ಬಾಬು ಹಿರೇಹೊಳಿ, ಪರಪ್ಪ ಯಲಿಗಾರ, ಶಂಭು ಭಜಂತ್ರಿ, ಇತರರಿದ್ದರು.
ಲಖಮಾಪುರ ಸ್ಥಳಾಂತರಕ್ಕೆ ಒತ್ತಾಯ
ನರಗುಂದ: ತಾಲೂಕಿನ ಪ್ರವಾಹ ಪೀಡಿತ ವಿವಿಧ ಗ್ರಾಮಗಳಿಗೆ ವಿಧಾನ ಪರಿಷತ್ ಸದಸ್ಯ ಎಸ್.ಆರ್. ಪಾಟೀಲ ಭಾನುವಾರ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು.
ಪ್ರವಾಹ ಸಂದರ್ಭದಲ್ಲಿ ಲಖಮಾಪುರ ಗ್ರಾಮ ನಡುಗಡ್ಡೆಯಂತಾಗುತ್ತದೆ. ಅಲ್ಲದೆ, ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ, ಸೇತುವೆ ಹಾಗೂ ವಿವಿಧ ಬೆಳೆಗಳು ಸಂಪೂರ್ಣ ಕೊಚ್ಚಿಕೊಂಡು ಹೋಗಿವೆ. ಕಳೆದ ವರ್ಷ ಪ್ರವಾಹದಿಂದ ಉಂಟಾದ ಹಾನಿಗೆ ಸರ್ಕಾರ ಇನ್ನೂ ಪರಿಹಾರ ನೀಡಿಲ್ಲ. ಸಂತ್ರಸ್ತರಿಗೆ ಶಾಶ್ವತ ಸೂರು ಕಲ್ಪಿಸಿಲ್ಲ. ಪ್ರವಾಹ ಮತ್ತು ಕರೊನಾ ನಿಯಂತ್ರಿಸಲು ರಾಜ್ಯ ಸರ್ಕಾರ ವಿಫಲವಾಗಿದೆ. ಲಖಮಾಪುರ ಗ್ರಾಮವನ್ನು ಸ್ಥಳಾಂತರಿಸಲು ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಭರವಸೆ ನೀಡಿದರು.
ಜಿಪಂ ಅಧ್ಯಕ್ಷ ರಾಜುಗೌಡ ಕೆಂಚನಗೌಡ್ರ, ನರಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ ಯಾವಗಲ್ಲ, ಟಿ.ಬಿ. ಶಿರಿಯಪ್ಪಗೌಡ್ರ, ಪ್ರಕಾಶಗೌಡ ತಿರಕನಗೌಡ್ರ, ಇಸಾಕ್ ಮಸೂತಿಮನಿ, ಆರ್.ಆರ್. ತಿಮ್ಮರಡ್ಡಿ, ತಹಸೀಲ್ದಾರ್ ಎ.ಎಚ್. ಮಹೇಂದ್ರ, ಸಿಪಿಐ ಡಿ.ಬಿ. ಪಾಟೀಲ, ಇತರರಿದ್ದರು.
EndFragment