

ರೇವಣಸಿದ್ದಪ್ಪ ಪಾಟೀಲ್ ಬೀದರ್
ಒಂದು ವಾರ ಸತತ ಸುರಿದ ವ್ಯಾಪಕ ಮಳೆಯಿಂದಾಗಿ ಜಿಲ್ಲೆಯ 26 ಕೆರೆಗಳು ಸಂಪೂರ್ಣ ಭರ್ತಿಯಾಗಿವೆ. ಕಾರಂಜಾ ಜಲಾಶಯ ಸಹ ಅರ್ಧಕ್ಕೂ ಅಧಿಕ ತುಂಬಿದ್ದು, ಮಾಂಜ್ರಾ ನದಿ ಮೈದುಂಬಿಕೊಂಡು ಹರಿಯುತ್ತಿದೆ.
ಜಿಲ್ಲೆಯಲ್ಲಿ ಏಳು ದಿನದ ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡು ರೈತರು ತತ್ತರಿಸಿದರೆ, ನದಿ, ಕೆರೆ, ಜಲಾಶಯಗಳಿಗೆ ಜೀವಕಳೆ ಬಂದಿದೆ. ಜಿಲ್ಲೆಯಲ್ಲಿರುವ ಸಣ್ಣ ನೀರಾವರಿ ಇಲಾಖೆ 125 ಕೆರೆಗಳ ಪೈಕಿ ನಿರಂತರ ಮಳೆಗೆ 26 ಭರ್ತಿಯಾಗಿವೆ. ಉಳಿದ ಕೆರೆಗಳ ಒಡಲು ಶೇ.50ಕ್ಕೂ ಹೆಚ್ಚು ತುಂಬಿಕೊಂಡಿದೆ. ಸದ್ಯ ಮಳೆಗೆ ವಿರಾಮ ಬಿದ್ದಿದೆ. ಆದರೆ ಮತ್ತೆ ಸುರಿದರೆ ತುಂಬಿದ ಕೆರೆಗಳು ಅಪಾಯ ಸೃಷ್ಟಿಸುವ ಆತಂಕ ಎದುರಾಗಿದೆ.
ಔರಾದ್ ತಾಲೂಕಿನಲ್ಲಿ (ಕಮಲನಗರ ಸೇರಿ) ಜಿಲ್ಲೆಯಲ್ಲೇ ಅತಿ ಹೆಚ್ಚು 36 ಕೆರೆಗಳಿದ್ದು, ಇವುಗಳಲ್ಲಿ 21 ತುಂಬಿವೆ. ಭಾಲ್ಕಿ ತಾಲೂಕಿನ 17ರಲ್ಲಿ 3, ಬೀದರ್ ತಾಲೂಕಿನ 34ರಲ್ಲಿ 2 ಕೆರೆ ಭತರ್ಿಯಾಗಿವೆ. ಹುಮನಾಬಾದ್ನಲ್ಲಿ 8, ಚಿಟಗುಪ್ಪ 7, ಬಸವಕಲ್ಯಾಣ 21, ಹುಲಸೂರು ತಾಲೂಕಿನ 2 ಸೇರಿ ಜಿಲ್ಲೆಯಲ್ಲಿ 125 ಕೆರೆಗಳಿವೆ.
23 ಕೆರೆಗಳು ಶೇ.51ರಿಂದ 99 ಭರ್ತಿಯಾಗಿವೆ. 27 ಕರೆ ಶೇ.31-50, ಶೇ.1-30ರಷ್ಟು 49 ಕೆರೆ ಭತರ್ಿಯಾಗಿವೆ. ಸದ್ಯ ಯಾವುದೇ ಕೆರೆ ಅಪಾಯ ಮಟ್ಟಕ್ಕೆ ಹೋಗಿಲ್ಲ. ಹೆಚ್ಚಿನ ಮಳೆಯಾದರೂ ಸಮಸ್ಯೆ ಆಗದಂತೆ ಎಲ್ಲ ಕೆರೆಗಳ ಮೇಲೆ ನಿಗಾ ಇಡಲಾಗಿದೆ ಎಂದು ಸಣ್ಣ ನೀರಾವರಿ ಇಲಾಖೆ ಕಾರ್ಯನಿವರ್ಾಹಕ ಅಭಿಯಂತರ ಸುರೇಶ ಮೇದಾ ವಿಜಯವಾಣಿಗೆ ತಿಳಿಸಿದ್ದಾರೆ.
ಕಾರಂಜಾಗೆ ನೀರು: ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ ಹತ್ತಿರದ ಕಾರಂಜಾ ಜಲಾಶಯಕ್ಕೂ ಭರಪೂರ ಮಳೆ ಜೀವಕಳೆ ತಂದಿದೆ. ಒಂದು ವಾರದಲ್ಲಿ 1 ಟಿಎಂಸಿಗಿಂತ ಹೆಚ್ಚು ನೀರು ಬಂದಿದೆ. ಶುಕ್ರವಾರವರೆಗೆ 5.28 ಟಿಎಂಸಿ (ಶೇ.68.11) ನೀರು ಸಂಗ್ರಹವಾಗಿದೆ. ಜಲಾಶಯದ ಅಚ್ಚುಕಟ್ಟು ಪ್ರದೇಶ ಹಾಗೂ ಉಗಮ ಸ್ಥಾನವಾದ ತೆಲಂಗಾಣದ ಕೊತ್ತುರ್ ವ್ಯಾಪ್ತಿಯಲ್ಲಿ ಇನ್ನೂ ಮಳೆ ಬರುತ್ತಿರುವ ಕಾರಣ ಒಳಹರಿವು ಮುಂದುವರಿದಿದ್ದು, ಇನ್ನಷ್ಟು ನೀರು ಸಂಗ್ರಹವಾಗುವ ಸಾಧ್ಯತೆಗಳಿವೆ.
ಬೀದರ್ ನಗರ, ಭಾಲ್ಕಿ, ಹುಮನಾಬಾದ್, ಚಿಟಗುಪ್ಪ ಪಟ್ಟಣ ವಾಸಿಗಳ ಕುಡಿಯುವ ನೀರಿಗೆ ಈ ಜಲಾಶಯವೇ ಮೂಲಾಧಾರ. ಪ್ರತಿವರ್ಷ ಕುಡಿಯುವ ನೀರಿಗಾಗಿ ಅಂದಾಜು 1 ಟಿಎಂಸಿ ನೀರು ಬೇಕಾಗುತ್ತದೆ. ಕಳೆದ ವರ್ಷದ ಅತಿವೃಷ್ಟಿಯಿಂದ ಜಲಾಶಯ ಭರ್ತಿಯಾಗಿತ್ತು. ಸದ್ಯ 358 ಕ್ಯೂಸೆಕ್ ಒಳಹರಿವು ಇದೆ. ಕಾರಂಜಾ ಶೇ.68 ತುಂಬಿರುವುದು ಇದರ ನೀರನ್ನೇ ಅವಲಂಬಿಸಿದ ನಗರ, ಪಟ್ಟಣ ಜನರಲ್ಲಿ ಸಂತಸ ಮೂಡಿಸಿದೆ. ಬಸವಕಲ್ಯಾಣ ತಾಲೂಕಿನ ಚುಳಕಿನಾಲಾ ಜಲಾಶಯ ಶೇ.79.08 ಹಾಗೂ ಮುಲ್ಲಾಮಾರಿ ಮೇಲ್ದಂಡೆ ಶೇ.86.50 ಭರ್ತಿಯಾಗಿದೆ.