

ಚಿತ್ರದುರ್ಗ: ವಾಯುಮಾಲಿನ್ಯ ನಿಯಂತ್ರಣಕ್ಕೆ ವಿದ್ಯಾರ್ಥಿಗಳು ಕೂಡ ಕೈ ಜೋಡಿಸಬೇಕು ಎಂದು ಆರ್‌ಟಿಒ ಭರತ್ ಎಂ. ಕಾಳಿಸಿಂಗೆ ಹೇಳಿದರು. ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯಲ್ಲಿ ಬುಧವಾರ ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಅಭಿಯಾನದ ಅಂಗವಾಗಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಹಾಗೂ ಜಾಗೃತಿ ಅಭಿಯಾನದ ಸಮಾರೋಪದಲ್ಲಿ ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಅನೇಕ ವಿಚಾರಗಳನ್ನು ಎದುರಿಸುತ್ತೀರಿ. ಅವುಗಳಲ್ಲಿ ಒಳ್ಳೆಯದು, ಕೆಟ್ಟದು, ಸತ್ಯ- ಅಸತ್ಯದ ವಿಷಯಗಳು ಯಾವು ಎಂಬುದನ್ನು ಸ್ಪಷ್ಟವಾಗಿ ಅರಿತುಕೊಂಡು ಒಳ್ಳೆಯದನ್ನು, ಸತ್ಯವನ್ನು ಅರಿಯುವ ನಿಟ್ಟಿನಲ್ಲಿ ನಿಮ್ಮ ನಡೆ ಇರಲಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಾದ ಸಂತ ಜೋಸೆಫರ ಕಾನ್ವೆಂಟ್‌ನ 9ನೇ ತರಗತಿ ವಿದ್ಯಾರ್ಥಿನಿ ಪಿ.ಆರ್. ಸಂಜನಾ(ಪ್ರ), ಚಿನ್ಮೂಲಾದ್ರಿ ರಾಷ್ಟ್ರೀಯ ಪ್ರೌಢಶಾಲೆ 9ನೇ ತರಗತಿ ವಿದ್ಯಾರ್ಥಿ ಬಿ. ಮಣಿಕಂಠ(ದ್ವಿ), ವಾಸವಿ ವಿದ್ಯಾಸಂಸ್ಥೆ ಕನ್ನಡ ಮಾಧ್ಯಮ ಪ್ರೌಢ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ವಿ. ಕುಮುದಾ ಹಾಗೂ ಸಂತ ಜೋಸೇಫರ ಕಾನ್ವೆಂಟ್‌ನ 8ನೇ ತರಗತಿ ವಿದ್ಯಾರ್ಥಿನಿ ಎನ್. ಸ್ನೇಹ(ತೃತೀಯ), ವಾಸವಿ ಇಂಗ್ಲಿಷ್ ಮಾಧ್ಯಮ ಶಾಲೆ 8ನೇ ತರಗತಿ ವಿದ್ಯಾರ್ಥಿನಿ ಎಲ್. ಲಿಖಿತಾ, ಸಂತ ಜೋಸೆಫರ ಕಾನ್ವೆಂಟ್‌ನ 9ನೇ ತರಗತಿಯ ಶೇಖ್‌ಅಪ್ಸಾ ಪಾತಿಮಾ, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ 10ನೇ ತರಗತಿ ವಿದ್ಯಾರ್ಥಿ ಎಸ್.ವರುಣ್ ಹಾಗೂ ಮದಕರಿ ನಾಯಕ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಎಸ್. ಹರೀಶ್(ಸಮಾಧಾನಕರ)ಅವರಿಗೆ ಬಹುಮಾನ ವಿತರಿಸಲಾಯಿತು. ಸಾರಿಗೆ ಇಲಾಖೆ ಅಧೀಕ್ಷಕರಾದ ರುದ್ರಮ್ಮ, ಪಿ. ನಳಿನಾ, ಹೇಮಂತ್ ಇತರರು ಇದ್ದರು.